ಸರ್ಕಾರವೇ ಶಿಷ್ಯವೇತನ ಪಾವತಿಸಲಿ ಎಂದ ಶಾಮನೂರು

IMG_20200708_122232_20200708160311407.jpg
Published on

ದಾವಣಗೆರೆ : ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಕಿ ಶಿಷ್ಯವೇತನವನ್ನು ಸರ್ಕಾರವೇ ನೀಡಬೇಕು ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಶಿಷ್ಯವೇತನ ಬಾಕಿ ನೀಡಲು ಆಗ್ರಹಿಸಿ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ತಮ್ಮ ನಿವಾಸದಲ್ಲಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗಿರುವ ಈ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದು ರ‌್ಯಾಂಕ್ ವಿಜೇತರಿದ್ದಾರೆ. ಅವರಿಗೆ ಮೊದಲಿನಿಂದಲೂ ಸರ್ಕಾರವೇ ಶಿಷ್ಯವೇತನ ನೀಡುತ್ತಾ ಬಂದಿದೆ ಎಂದರು.
2016ರಲ್ಲಿ ಆಡಿಟ್ ಆಕ್ಷೇಪಣೆಯಾಗಿತ್ತು, ಆದರೂ 2019ರ ವರೆಗೆ ಸರ್ಕಾರವೇ ಶಿಷ್ಯವೇತನವನ್ನು ನೀಡಿದೆ. ಅಲ್ಲಿಂದೀಚೆಗೆ ನೀಡುತ್ತಿಲ್ಲ. ಸರ್ಕಾರವೇ ಕೊಡಬೇಕು ಎಂದು ಹೇಳಿಬಂದಿರುವೆ.
ಕ್ಲಿನಿಕಲ್ ಸೌಲಭ್ಯಕ್ಕಾಗಿ 2 ಕೋಟಿ ರೂ. ನೀಡುತ್ತಿದ್ದೇವೆ. ಅಲ್ಲಿ ಕೆಲಸ ಮಾಡುವ 80 ಜನ ನಮ್ಮ ವೈದ್ಯರಿಗೆ 1 ಕೋಟಿ ರೂ. ವೇತನ ಕೊಡುತ್ತಿದ್ದೇವೆ. ಇದನ್ನೆಲ್ಲ ವಿವರವಾಗಿ ಮಾತನಾಡಿದ್ದೇವೆ. ಮತ್ತೆ ಮಾತುಕತೆಗೆ ಕರೆದರೆ ಹೋಗುವುದಾಗಿ ಸ್ಪಷ್ಟಪಡಿಸಿದರು.
ಆಡಳಿತ ಮಂಡಳಿಯವರೇ ಕೊಡುತ್ತಾರೆ ಎಂದು ಸರ್ಕಾರ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂದು ಉತ್ತರಿಸಿದರು.
ಇದಕ್ಕೂ ಮೊದಲು ವಿದ್ಯಾರ್ಥಿಗಳು ಜಯದೇವ ವೃತ್ತದಿಂದ ಶಾಸಕರ ನಿವಾಸದ ವರೆಗೆ ರ‌್ಯಾಲಿ ನಡೆಸಿದರು. 10 ದಿನಗಳಿಂದ ನಡೆಸುತ್ತಿರುವ ತಮ್ಮ ಹೋರಾಟದ ಬಗ್ಗೆ ವಿವರಿಸಿದರು. ಇದೇ ವೇಳೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಶಿವಶಂಕರಪ್ಪ, ನಿಮ್ಮ ಬೇಡಿಕೆ ಈಡೇರುವ ವರೆಗೆ ಹೋರಾಟ ಮುಂದುವರಿಸಿ ಎಂದು ತಿಳಿಸಿದರು.
...
(ಕೋಟ್)
ಶಾಸಕರನ್ನು ಭೇಟಿ ಮಾಡಿದ್ದೆವು. ಆಡಳಿತ ಮಂಡಳಿಯಿಂದ ಶಿಷ್ಯವೇತನ ನೀಡಲು ಆಗುವುದಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ನಾಳೆ ಒಂದು ದಿನ ಕಾಯುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ.
 ಡಾ. ಹರೀಶ್, ಜೆಜೆಎಂ ವಿದ್ಯಾರ್ಥಿ.
...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net