

ಬೆಟ್ಟದಪುರ: ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಎಲ್ಲ ಪ್ರತಿ ವರ್ಗದವರು ಪಡೆದುಕೊಂಡು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಸಮೀಪದ ಅತ್ತಿಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಮತ್ತು ಕೂಲಿಕಾರ್ಮಿಕ ರಿಗೆ ಸೌಲಭ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
84 ಅರ್ಜಿಗಳು: ಕಂದಾಯ, ಪಂಚಾಯಿತಿ, ಶಿಕ್ಷಣ, ಸೆಸ್ಕ್, ಆರೋಗ್ಯ, ಆಹಾರ, ಬ್ಯಾಂಕ್ ಹಾಗೂ ಕೆಎಸ್‌ಆರ್‌ಟಿಸಿ ಇಲಾಖೆಗಳಿಗೆ ಸಂಬಂಧಿಸಿದಂತೆ ಸುಮಾರು 84 ಅರ್ಜಿಗಳು ಸ್ವೀಕಾರವಾದವು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ ತಕ್ಷಣದಲ್ಲಿಯೇ ಅನುಕೂಲ ಮಾಡಿಕೊಡಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಸರ್ಕಾರದ ವತಿಯಿಂದ ನೀಡಲಾದ ಐದು ಲಕ್ಷ ರೂ.ಗಳ ಆದೇಶ ಪತ್ರವನ್ನು ವಿತರಣೆ ಮಾಡಲಾಯಿತು.
30ರಂದು ಸೀಮಂತ: ಸೆ.30ರಂದು ತಾಲೂಕಿನ ಸುಮಾರು 1,100 ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಭಾಗವಹಿಸುವಂತೆ ಶಾಸಕರು ಕೋರಿದರು. ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಲೂಕು ಪಂಚಾಯಿತಿ ಇಒ ಕೃಷ್ಣಕುಮಾರ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಕೃಷಿ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಅಬಕಾರಿ ಇಲಾಖೆಯ ಧರ್ಮರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಹರೀಶ್, ಉಪ ತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಆನಂದ್ ಇದ್ದರು.