ಸರ್ಕಾರದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ

Sl Byrappa
Published on

ಮೈಸೂರು: ಕನ್ನಡ ಸಾರಸ್ವತ ಲೋಕದ ದಿಗ್ಗಜ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ, ಹೆಸರಾಂತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಬ್ರಾಹ್ಮಣ ಹೊಯ್ಸಳ ಕರ್ನಾಟಕ ಸಂಪ್ರದಾಯದಂತೆ ಸರ್ಕಾರದ ಸಕಲ ಗೌರವದೊಂದಿಗೆ ಶುಕ್ರವಾರ ನಡೆಯಿತು.

ರಾಜಕೀಯ ನಾಯಕರು, ಎಸ್.ಎಲ್.ಭೈರಪ್ಪ ಅಭಿಮಾನಿಗಳು ಸೇರಿ ಸಾವಿರಾರು ಜನರು ಪಾಲ್ಗೊಂಡು ನೆಚ್ಚಿನ ಬರಹಗಾರನಿಗೆ ಅಂತಿಮ ನಮನ ಸಲ್ಲಿಸಿದರು. ಅರಮನೆ ಪುರೋಹಿತರಾದ ಚಂದ್ರಶೇಖರ ಶಾಸಿ ನೇತೃತ್ವದ ಏಳು ಜನ ಪುರೋಹಿತರ ತಂಡವು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿತು.

ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಭೈರಪ್ಪ ಅವರ ಮಕ್ಕಳಾದ ರವಿಶಂಕರ್, ಉದಯ ಶಂಕರ್ ಹಾಗೂ ಸಾಹಿತಿ ಸಹನಾ ವಿಜಯ್‌ಕುಮಾರ್ ಮೃತರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಮಾಜಿ ಸಂಸದ ಪ್ರತಾಪಸಿಂಹ, ಹಿರಿಯ ಪತ್ರಕರ್ತ ವಿಶ್ವೇಶ್ವರಭಟ್ ಕೂಡ ಕೈ ಜೋಡಿಸಿದರು. ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಆಗುತ್ತಿದ್ದಂತೆ ಅಭಿಮಾನಿಗಳು ‘ಅಮರ್ ರಹೇ ಭೈರಪ್ಪಾಜಿ’, ‘ಅಮರ್ ರಹೇ ಭೈರಪ್ಪಾಜಿ’, ‘ಅಮರ್ ರಹೇ’ ಎಂಬ ಘೋಷಣೆ ಕೂಗಿದರು. ಆ ಮೂಲಕ ಜೀವನ ಯಾನ ಮುಗಿಸಿದ ಅಕ್ಷರ ಬ್ರಹ್ಮ ಎಸ್.ಎಲ್.ಭೈರಪ್ಪ ಪಂಚಭೂತಗಳಲ್ಲಿ ಲೀನವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net