ಸರ್ಕಾರದ ವಿರುದ್ಧ ಹೋರಾಟಕ್ಕೆ ಜೆಡಿಎಸ್ ನಿರ್ಧಾರ; ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ದೇವೇಗೌಡ ಹೇಳಿಕೆ

GT Devegouda
Published on

ಬೆಂಗಳೂರು:ರೈತರ ಸಮಸ್ಯೆ, ವಿದ್ಯುತ್ ಕಡಿತ, ಕಾವೇರಿ ನೀರು, ಲಿಕ್ಕರ್ ಬೆಲೆ ಏರಿಕೆ, ಗ್ಯಾರಂಟಿ ತೊಂದರೆಗಳ ಬಗ್ಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದರು.

ಜೆ.ಪಿ.ಭವನದಲ್ಲಿ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಪ್ರಯೋಜಗಳು ಮತ್ತು ಅವುಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ನಾವು ಪಂಚರತ್ನ ಯೋಜನೆಗಳು ಜಾರಿಯಾದರೆ ಯಾವ ರೀತಿ ಉಪಯೋಗ ಆಗುತ್ತದೆ ಎಂಬುದನ್ನೂ ಸಮಾಲೋಚನೆ ಮಾಡಿದ್ದೇವೆ. ಇದನ್ನು ಜನರಿಗೆ ತಿಳಿಸುವ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಇದೇ ತಿಂಗಳ ಎರಡನೇ ವಾರದಲ್ಲಿ ಹೊಸಪೇಟೆ, ಕಲಬುರಗಿ ಜಿಲ್ಲೆಗಳಲ್ಲಿ ಸಮಾವೇಶ ಮಾಡಲು ತೀರ್ಮಾನ ಮಾಡಿದ್ದೇವೆ. ರಾಷ್ಟ್ರೀಯ ನಾಯಕರ ಜತೆ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡುತ್ತೇವೆ ಎಂದರು. ರಾಜ್ಯ ಸರ್ಕಾರ ನೂರು ದಿನಗಳಲ್ಲಿ ಜಾರಿ ಮಾಡಿದ ಗ್ಯಾರಂಟಿ ಬಗ್ಗೆ ನೋಡಿದ್ದೇವೆ. ಒಂದು ಕಡೆ ಗೃಹಲಕ್ಷ್ಮೀ ಯೋಜನೆ ಮೂಲಕ 2000 ರೂ. ನೀಡಿದ್ದಾರೆ. ಇನ್ನೊಂದು ಕಡೆ ಮದ್ಯಕ್ಕೆ ದರ ಹೆಚ್ಚಳ ಮಾಡಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ:

ನಾನು ಐದು ಬಾರಿ ಗೆದ್ದಿದ್ದೀನಿ. ರಾಜಶೇಖರ ಮೂರ್ತಿ ವಿರುದ್ಧ ಸೋತಿದ್ದೀರಿ. ನನ್ನ ವಿರುದ್ಧ ಸೋತಿದ್ದೀರಿ. 2013 ರಲ್ಲಿ ನನ್ನ ಸೋಲಿಸಲು ಬಂದಿರಿ. ಆದರೆ ಸೋಲಿಸಲು ಆಯಿತೆ? ನೀವು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದೀರಿ. ಅಂದು ಸೋನಿಯಾ ಗಾಂಧಿ ಅವರಿಗೆ ಬೈದಿಲ್ಲವೆ? ಈಗ ಯಾರ ಕಾಲ ಕೆಳಗೆ ಇದ್ದಿರಾ? ಎಂದು ‘ಕೆಲಸಕ್ಕೆ ಬಾರದವರನ್ನು ಗೆಲ್ಲಿಸಿದ್ದೀರಿ’ ಎಂಬ ಹೇಳಿಕೆ ನೀಡಿದ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾನು ನಿಮ್ಮನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಲು ಏನೇನು ಮಾಡಿದೆ ಗೊತ್ತಿಲ್ಲವೆ? ನೀವು ಬೇರೆಯವರು ಅಧಿಕಾರ ಮಾಡಲು ಬಿಡಲ್ಲ. ನನಗೆ ನೀವು ಅನ್ಯಾಯ ಮಾಡಿದ್ದೀರಿ. ಸುಮ್ಮನೆ ಏಕವಚನದಲ್ಲಿ ಮಾತಾಡಬೇಡಿ ಎಂದು ಜಿ.ಟಿ.ದೇವೇಗೌಡ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net