

ಹುಕ್ಕೇರಿ: ರಾಜ್ಯ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ನೀಡಿರುವುದು ಸರ್ಕಾರಿ ದಾಖಲೆಗಳ ಗಣಕೀರಣ ಹಾಗೂ ಉತ್ತಮ ಸೇವೆ ನೀಡುವುದಕ್ಕಾಗಿ. ಹಾಗಾಗಿ ಸರಿಯಾಗಿ ದಾಖಲಾತಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕೆಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸ್ಥಳೀಯ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಕಂದಾಯ ಇಲಾಖೆಯಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಕೊಡಮಾಡಿದ ಲ್ಯಾಪ್‌ಟಾಪ್‌ಗಳನ್ನು ಸೋಮವಾರ ವಿತರಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ದಾಖಲೆಗಳ ಡಿಜಿಟಲೀಕರಣ ಮಾಡಲು ಶ್ರಮಿಸುತ್ತಿವೆ. ಜನರಿಗೆ ತೀವ್ರಗತಿಯಲ್ಲಿ ಸರ್ಕಾರಿ ದಾಖಲೆ ಒದಗಿಸಲು ಅನುಕೂಲ ಆಗುವಂತೆ ಕಂದಾಯ ಇಲಾಖೆಯನ್ನು ಆಧುನೀಕರಿಸಲಾಗುತ್ತಿದೆ. ಅದಕ್ಕಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಂಪ್ಯೂಟರ್ ಜ್ಞಾನ ಅನಿವಾರ್ಯ ಎಂದರು.
ತಹಸೀಲ್ದಾರ್ ಮಂಜುಳಾ ನಾಯಕ ಮಾತನಾಡಿ, ಹುಕ್ಕೇರಿ ಕ್ಷೇತ್ರಕ್ಕೆ ೧೦ ಹಾಗೂ ಯಮಕನಮರಡಿ ಕ್ಷೇತ್ರಕ್ಕೆ ೭ ಲ್ಯಾಪ್‌ಟಾಪ್ ವಿತರಿಸಿದ್ದು, ಇನ್ನುಳಿದವರಿಗೆ ಸರ್ಕಾರದಿಂದ ಲ್ಯಾಪ್‌ಟಾಪ್ ಬಂದ ಬಳಿಕ ವಿತರಿಸುತ್ತೇವೆ ಎಂದರು.
ಶಾಸಕರು ೧೦ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟ್ಯಾಪ್ ವಿತರಿಸಿದರು.
ಮುಖಂಡರಾದ ಸತ್ತೆಪ್ಪ ನಾಯಿಕ, ಗುರುರಾಜ ಕುಲಕರ್ಣಿ, ರಾಚಯ್ಯ ಹಿರೇಮಠ, ಮಹಾನಿಂಗ ಸನದಿ, ರಾಜು ಮುನ್ನೋಳಿ, ಸುಚಿತ ಪಾಟೀಲ, ಬಸಗೌಡ ಪಾಟೀಲ, ಉಪ-ತಹಸೀಲ್ದಾರ್‌ರಾದ ಎನ್.ಆರ್. ಪಾಟೀಲ, ಸಿ.ಎ. ಪಾಟೀಲ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎನ್.ಆರ್. ಪಾಟೀಲ, ತಾಲೂಕಾಧ್ಯಕ್ಷ ಉಮೇಶ ನಾಗರಾಳಿ, ಸಂತೋಷ ನಾಯ್ಕರ, ಮಲ್ಲಿಕಾರ್ಜುನ ಸಾರಾಪೂರೆ, ಎ.ಎಂ.ಕಮತನೂರ, ಬಿ.ಕೆ.ಚೌಗಲಾ, ಕುಮಾರ ರಾಠೋಡ, ಆರ್.ಆರ್.ಹುಡೇದ, ಬಿ.ಕೆ.ಯಲಿಗಾರ, ಎಸ್.ಬಿ.ಘಸ್ತಿ, ಜಿ.ಎಂ.ಕಿತ್ತೂರ ಇತರರಿದ್ದರು.