

ಬೆಟ್ಟದಪುರ: ಬಡವರು ಸೇರಿದಂತೆ ಎಲ್ಲ ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳು ಹಾಗೂ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಬೆಟ್ಟದಪುರ ಸಮೀಪದ ಹಲಗನಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರಿಗೆ ಸರ್ಕಾರದ ಸೇವೆಗಳ ಬಗ್ಗೆ ಮಾಹಿತಿ ಕೊರತೆಯಿಂದ ಪ್ರಯೋಜನ ಪಡೆಯುವಲ್ಲಿ ವಿಫಲವಾಗುತ್ತಾರೆ. ಅಗತ್ಯ ಮಾಹಿತಿ ನೀಡುವ ಮೂಲಕ ಸೇವೆ ಒದಗಿಸುವಲ್ಲಿ ಶ್ರಮಪಟ್ಟರೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರೈತರು ತಂಬಾಕಿನ ಬದಲಿಗೆ ಪರ್ಯಾಯ ಬೆಳೆ ಬೆಳೆದು ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ವರ್ತಕ ಯಾವ ರೀತಿ ಲಾಭ ಪಡೆಯುವ ಆಸೆ ಇಟ್ಟುಕೊಂಡಿರುತ್ತಾನೋ ಅದೇ ರೀತಿ ಯಾವ ಬೆಳೆಯಿಂದ ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂಬ ಬಗ್ಗೆ ರೈತರು ಮಾಹಿತಿ ಪಡೆಯಬೇಕು. ಸಾರ್ವಜನಿಕರಿಂದ ಬಂದಿರುವ ಅಹವಾಲುಗಳನ್ನು ವಿಲೇವಾರಿ ಮಾಡಿ ಪರಿಹಾರ ಸಿಗುವಂತೆ ಮಾಡಿ ಎಂದು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪಿಂಚಿಣಿ ಯೋಜನೆಯ ಆದೇಶ ಪತ್ರ, ಮಳೆಯಲ್ಲಿ ಹಾಳಾದ ಮನೆಗಳ ನಿರ್ಮಾಣಕ್ಕೆ ಹಣ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿದ್ಯಾಶಂಕರ್, ತಾ.ಪಂ ಮಾಜಿ ಸದಸ್ಯ ಅತ್ತರ್‌ಮತಿನ್, ಎಪಿಎಂಸಿ ಮಾಜಿ ನಿರ್ದೇಶಕ ರವೀಗೌಡ, ಗ್ರಾ.ಪಂ ಅಧ್ಯಕ್ಷೆ ಗೀತಾ ಮಹದೇವ್, ಉಪಾಧ್ಯಕ್ಷ ಷಫೀರ್‌ಅಹಮ್ಮದ್, ಸದಸ್ಯರಾದ ನೂರ್‌ಅಸ್ಮಾ, ಸನೋಬಿಯಾ, ಪಿಎಸಿಸಿಎಸ್‌ಎನ್ ಅಧ್ಯಕ್ಷ ಸೈಯದ್‌ಹಸೀಬ್, ತಹಸೀಲ್ದಾರ್ ಯದುಗಿರೀಶ್, ತಾಲೂಕು ಪಂಚಾಯಿತಿ ಇಒ ಕೃಷ್ಣಕುಮಾರ್, ಕಂದಾಯ ನಿರೀಕ್ಷಕ ಆನಂದ್, ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್, ಬಿಇಒ ಬಸವರಾಜು, ಎಡಿಎಲ್‌ಆರ್ ಚಿಕ್ಕಣ್ಣ, ಆರ್‌ಎಫ್‌ಒ ಕಿರಣ್‌ಕುಮಾರ್, ಜಿಪಂ ಎಇಇ ಮಲ್ಲಿಕಾರ್ಜುನ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ, ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಹಿತೇಂದ್ರ, ಸೆಸ್ಕ್ ಇಂಜಿನಿಯರ್ ಆಕಾಶ್ ಇತರರು ಇದ್ದರು.