

ಕೋಲಾರ : ಗೌರಿ-ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭಗೊಂಡಿದ್ದರೂ ಕರೊನಾ ನಿಯಂತ್ರಣದ ಕಾರಣಕ್ಕೆ ಗಣೇಶೋತ್ಸವ ಆಚರಣೆಗೆ ಸರ್ಕಾರ ರೂಪಿಸಿರುವ ಕಠಿಣ ಷರತ್ತುಗಳು ಹಬ್ಬದ ಸಂಭ್ರಮವನ್ನು ಮಂಕಾಗಿಸಿವೆ.
ಗಣೇಶ ಚತುರ್ಥಿ ಬಂದರೆ ಸಾಕು, ಮನೆ ಮನೆಯಲ್ಲೂ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸುವ ಜತೆಗೆ ಸಂಭ್ರಮ, ಸಡಗರ, ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಅದ್ದೂರಿತನ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ, ಡಿಜೆ ಹಾಡು, ಕುಣಿತ, ಹೀಗೆ ಎಲ್ಲವೂ ಕಲರ್‌ಪುಲ್
ವರ್ಷಕ್ಕೊಮ್ಮೆ ಬರುವ ಗಣೇಶನ ಹಬ್ಬವನ್ನೇ ನಂಬಿಕೊಂಡು ಜೀವನ ಕಟ್ಟಿಕೊಳ್ಳುವ ಗಣೇಶ ಮೂರ್ತಿ ತಯಾರಕರು ಹಬ್ಬಕ್ಕೆ ಆರೇಳು ತಿಂಗಳ ಮುನ್ನವೇ ಮೂರ್ತಿ ತಯಾರಿಕೆ ಆರಂಭಿಸುವುದು ರೂಢಿ. ಇವರ ವಾರ್ಷಿಕ ಸಂಪಾದನೆ ಗಣೇಶ ಹಬ್ಬಕ್ಕೆ ಮುಕ್ತಾಯಗೊಳ್ಳುತ್ತದೆ. ದೊಡ್ಡ ಮೂರ್ತಿಗಳನ್ನು ಮಾಡಿ ಮಾರಾಟ ಮಾಡಿದರೆ ಮಾತ್ರ ಒಂದಷ್ಟು ಹಣ ಸಂಪಾದನೆ ಮಾಡಲು ಸಾಧ್ಯ,
ಆದರೆ ಎರಡು ವರ್ಷಗಳಿಂದ ಕರೊನಾ ಆತಂಕ ಮೂರ್ತಿ ತಯಾರಕರ ಅನ್ನವನ್ನು ಕಸಿದಿದೆ. ಶೆಡ್‌ಗಳಲ್ಲಿ ನಡೆಸುತ್ತಿದ್ದ ಬೃಹತ್ ಗಣೇಶ ಮೂರ್ತಿಗಳ ತಯಾರಿಕೆ ನಿಲ್ಲಿಸಿ ಮನೆಗಳಲ್ಲಿ ಕೂರಿಸುವ ಸಣ್ಣ-ಸಣ್ಣ ಗೌರಿ, ಗಣೇಶ ಮೂರ್ತಿ, ಗರಿಷ್ಠ ನಾಲ್ಕೈದು ಅಡಿಯೊಳಗಿನ ಗಣೇಶ ಮೂರ್ತಿಗಳನ್ನಷ್ಟೇ ತಯಾರಿಸಿದ್ದರು.
ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ನೀಡದಿದ್ದರೆ ಎಂಬ ಆತಂಕದಲ್ಲಿದ್ದರು.
ವಿಘ್ನ ನಿವಾರಕನಿಗೇ ಅಂಕುಶ: ಗಣೇಶೋತ್ಸವ ಸಮಿತಿ, ಹಿಂದುಪರ ಸಂಘಟನೆ ಹಾಗೂ ರಾಜಕೀಯ ವಲಯದಿಂದ ಬಂದ ಒತ್ತಡಕ್ಕೆ ಮಣಿದ ಸರ್ಕಾರ ಗಣೇಶೋತ್ಸವ ಆಚರಿಸಲು ಗ್ರೀನ್ ಸಿಗ್ನಲ್ ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿರುವುದು ಮೂರ್ತಿ ತಯಾರಕರು ಸ್ವಲ್ಪ ಉಸಿರಾಡುವಂತಾಗಿದೆ. ಗಣೇಶ ಉತ್ಸವ ಆಚರಣೆ ಸಮಿತಿಗಳು ಅಲ್ಪತೃಪ್ತರಾಗಿ ವಿಘ್ನ ನಿವಾರಕನ ಪೂಜೆಗೆ ಸರ್ಕಾರದ ಅಂಕುಶಕ್ಕೆ ಬೇಸರಿಸಿಕೊಂಡಿವೆ.
ಗಣೇಶೋತ್ಸವ ಆಚರಣೆಗೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳು, ಪಂಚಾಯಿತಿ, ಪೊಲೀಸ್, ಬೆಸ್ಕಾಂನಿಂದ ಪೂರ್ವಾನುಮತಿ, ಆಯೋಜಕರು ಕೋವಿಡ್ ನೆಗೆಟಿವ್, ವ್ಯಾಕ್ಸಿನೇಷನ್ ಪ್ರಮಾಣಪತ್ರ, ವಾರ್ಡ್‌ಗೊಂದು ಗಣೇಶ....ಹೀಗೆ ಸರ್ಕಾರ ಕಠಿಣ ನಿಬಂಧನೆ ಹೇರಿರುವುದರಿಂದ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಂಕುಶ ಬಿದ್ದಿದೆ. ಸೀಮಿತ ಸಂಖ್ಯೆಯಲ್ಲಷ್ಟೇ ಗಣಪತಿ ಮೂರ್ತಿ ಮಾರಾಟವಾಗಬಹುದಾದ್ದರಿಂದ ಮಾರುಕಟ್ಟೆ ಕಳೆಗುಂದಿತ್ತು.
ನಗರದ ರಂಗಮಂದಿರದ ಬಳಿಯ ಎದುರಿನ ರಸ್ತೆಯ ಖಾಲಿ ಜಾಗವನ್ನು ಬಾಡಿಗೆಗೆ ಪಡೆದಿರುವ ಮೂರ್ತಿ ಮಾರಾಟಗಾರರು ಶೆಡ್ ಹಾಕಿಕೊಂಡು ಮೂರು ದಿನಗಳಿಂದ ಗೌರಿ-ಗಣೇಶ ಮೂರ್ತಿ ಮಾರಾಟ ಆರಂಭಿಸಿದ್ದಾರೆ. ಗೌರಿಯ ಮೂರ್ತಿ 100ರಿಂದ 1000 ರೂ. ಹಾಗೂ ಗಣೇಶನ ಮೂರ್ತಿ 150 ರೂ.ನಿಂದ ಹಿಡಿದು 4 ಅಡಿಯ ಮೂರ್ತಿಗಳಿಗೆ 5000 ರೂ. ಮೇಲ್ಪಟ್ಟು ಬೆಲೆ ಇದೆ.
ಕುಂಬಾರಿಕೆ ವೃತ್ತಿಯನ್ನೇ ಅವಲಂಬಿಸಿ 20 ವರ್ಷಗಳಿಂದ ಮಣ್ಣಿನ ಗಣೇಶ ಮೂರ್ತಿ ತಯಾರಿಸಿ ಮಾರಾಟ ಮಾಡಿಕೊಂಡು ಜೀವನ ಮಾಡುತ್ತಿದ್ದೆವು, ಕರೊನಾ ಬಂದಾಗಿನಿಂದ ಮೂರ್ತಿಗಳ ವ್ಯಾಪಾರ ಅಷ್ಟಾಗಿ ನಡೆಯುತ್ತಿಲ್ಲ, ಈ ವರ್ಷ ಇದ್ದಿದ್ದೂ ಇಲ್ಲ ಎನ್ನುತ್ತಾರೆ ನಗರದ ಕುಂಬಾರಪೇಟೆಯ ಹರೀಶ್.
ಸಾರ್ವಜನಿಕರು ಪ್ರತಿವರ್ಷದಂತೆ ಮನೆಗಳಲ್ಲಿ ಪೂಜೆಗಾಗಿ ಗೌರಿಗಣೇಶ ಮೂರ್ತಿ ಖರೀದಿಸುತ್ತಿರುವುದು ಕಂಡುಬಂದರೆ ಸಾರ್ವಜನಿಕವಾಗಿ, ದೇವಾಲಯಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವ ಅನಿವಾರ್ಯತೆಗೆ ಆಯೋಜಕರು, ಸಮಿತಿಗಳು ಸಿಲುಕಿರುವುದರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಣೇಶ ಚತುರ್ಥಿಗೆ 24 ಗಂಟೆಗಳಿರುವಂತೆ ಮೂರ್ತಿಗಳ ಮಾರಾಟ ಚುರುಕುಗೊಳ್ಳುವ ನಿರೀಕ್ಷೆ ಇದೆ.
ಹಿಂದೆಲ್ಲ ಸಾಕಷ್ಟು ದಿನ ಮುಂಚಿತವಾಗಿಯೇ ಗಣೇಶಮೂರ್ತಿ ಮಾರಾಟ ಶುರು ಆಗುತ್ತಿತ್ತು. ಕರೊನಾ ಬಂದ ಮೇಲೆ ಎಲ್ಲದಕ್ಕೂ ಅಡ್ಡಿಯಾಗಿದೆ. ಗಣೇಶೋತ್ಸವ ಆಚರಣೆ ಬಗ್ಗೆ ಸರ್ಕಾರ ನಾಲ್ಕು ದಿನಗಳ ಹಿಂದಷ್ಟೇ ಷರತ್ತು ವಿಧಿಸಿ ಅನುಮತಿ ನೀಡಿರುವುದರಿಂದ ಮೂರ್ತಿಗಳ ಮಾರಾಟ ತೀರಾ ಕಡಿಮೆಯಾಗಿದೆ. ಕಿಲಾರಿಪೇಟೆ ನಂಜುಂಡಪ್ಪ, ಮಾರಾಟಗಾರ, ಕೋಲಾರ