ಬೆಂಗಳೂರು: ಕರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿನಂದಿಸಿದ್ದಾರೆ.
ದೇಶಕ್ಕೆ ಅಪ್ಪಳಿಸಿರುವ ಕರೊನಾ ವೈರಸ್ ವಿರುದ್ಧ ಹಗಲಿರುಳು ಹೋರಾಡುತ್ತಿರುವ ಆರೋಗ್ಯ, ಕಂದಾಯ, ಪೊಲೀಸ್ ಮತ್ತಿತರ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ನಮ್ಮ ಪಕ್ಷದ ಹಾಲಿ, ಮಾಜಿ, ಭಾವೀ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಆಹಾರ ಮತ್ತು ಆರೋಗ್ಯದ ಕಿಟ್ಗಳನ್ನು ಬಡವರಿಗೆ ಹಂಚುತ್ತಿದ್ದಾರೆ. ಸಮಯದ ಪ್ರಾಮುಖ್ಯತೆ ಮತ್ತು ಅಗತ್ಯತೆ ಅರ್ಥಮಾಡಿಕೊಂಡು ಕ್ರಿಯಾಶೀಲರಾಗಿದ್ದಾರೆ. ಇವರೆಲ್ಲರ ಸೇವೆ ಅಭಿನಂದನೀಯ ಎಂದು ಶ್ಲಾಘಿಸಿದರು.
ನಮಗೆಲ್ಲರಿಗೂ ನಾಗರಿಕ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿ ಇರುವುದರಿಂದ ನಾವೂ ಸರ್ಕಾರದೊಂದಿಗೆ ಕೈ ಜೋಡಿಸಿ ಸಂತ್ರಸ್ತರ, ಬಡವರ ನೆರವಿಗೆ ಬರಬೇಕಾಗಿದೆ ಎಂದು ಹೇಳಿದ್ದಾರೆ.