ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ

Siddaramaiah
Published on

ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ. ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಒಟ್ಟಾಗಿದ್ದೇವೆ, ಯಾರೂ ಏನೂ ಹೇಳಿದರು ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮಬ್ಬರ ನಡುವೆ ತಂದಾಕುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲ್ಲ. ನಾನು ಡಿ.ಕೆ.ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ನಮ್ಮ ಸರ್ಕಾರ 5 ವರ್ಷ ಬಂಡೆಯ ರೀತಿ ಇರುತ್ತದೆ ಎಂದು ಡಿಕೆಶಿ ಕೈಹಿಡಿದು ಘೋಷಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಸುರ್ಜೆವಾಲಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ ಅವರು ಅಭಿಪ್ರಾಯ ಕೇಳಿ, ಅವರ ಕೆಲಸವನ್ನು ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ ಅವರು ಈ ಬಾರಿಯ ದಸರಾ ಉದ್ಘಾಟಿಸುವುದಿಲ್ಲ ಎಂದು ಬಿಜೆಪಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಶ್ರೀರಾಮುಲು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಅವರು ಹೇಗೆ ಭವಿಷ್ಯ ನುಡಿಯುತ್ತಾರೆ ಎಂದು ಪ್ರಶ್ನಿಸಿದರು.

ಹಾಸನ ಜಿಲ್ಲೆಯಲ್ಲಿ ಹೃದಾಯಘಾತ ಪ್ರಕರಣಗಳು ಹೆಚ್ಚಾದ ವಿಚಾರವಾಗಿ ಪ್ರತಿಕ್ರಿಸಿದ ಅವರು, ಅದರ ಬಗ್ಗೆ ಪರಿಶೀಲನೆ ನಡೆಸುತ್ತೇನೆ.ಹೃದಯಾಘಾತ ಹೆಚ್ಚಾಗಲು ಕಾರಣ ಏನು ಎಂಬುದಕ್ಕೆ ತಜ್ಞರ ಮೂಲಕ ಮಾಹಿತಿ ತರಿಸಿಕೊಳ್ಳುತ್ತೇನೆ. ಅದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮಹಾರಾಷ್ಟ್ರದಲ್ಲಿ ದ್ವಿಭಾಷಾ ಸೂತ್ರದಡಿ ಶಿಕ್ಷಣಕ್ಕೆ ಅವಕಾಶ ವಿಚಾರವಾಗಿ ಪ್ರತಿಕ್ರಿಸಿದ ಅವರು, ನಾವು ಸಹ ದ್ವಿಭಾಷಾ ಸೂತ್ರದ ಶಿಕ್ಷಣದ ಪರ ಇದ್ದೇವೆ. ಮೊದಲಿನಿಂದಲೂ ನಮ್ಮದು ದ್ವಿಭಾಷಾ ಸೂತ್ರದ ಶಿಕ್ಷಣದ ವಾದವಾಗಿದೆ. ಈಗಲೂ ದ್ವಿಭಾಷಾ ಶಿಕ್ಷಣಕ್ಕೆ ನಾವು ಬದ್ಧ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾವೇರಿ ಆರತಿಯನ್ನು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಮಾಡುತ್ತೇವೆ. ಆಯೋಜನೆ ಸಂಬಂಧ ಅಗತ್ಯ ಸಿದ್ಧತೆ ನಡೆಯುತ್ತಿದೆ. ಕಾವೇರಿ ಆರತಿಯಿಂದ 1500 ಜನರಿಗೆ ಉದ್ಯೋಗ ದೊರೆಯುತ್ತದೆ. ಆದರೆ, ಈ ಸಂಬಂಧ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net