ಸರೋಜಾದೇವಿ ಪರ, ವಿರುದ್ಧ ಹೋರಾಟ: ಪ್ರತ್ಯೇಕವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

15TMK_DSS_Ambedkar_Sene2
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜಾದೇವಿ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
Published on

ತುಮಕೂರು: ಭ್ರಷ್ಟಾಚಾರ ಆರೋಪದಲ್ಲಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜಾದೇವಿ ಎತ್ತಂಗಡಿ ಪ್ರಕರಣದಲ್ಲಿ ವಿವಿಧ ದಲಿತಪರ ಸಂಘಟನೆಗಳು ಪರ, ವಿರೋಧವಾಗಿ ಬೀದಿಗಿಳಿಯಲಾರಂಭಿಸಿದ್ದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ದಲಿತ ಸಂಘರ್ಷ ಸಮಿತಿ ಎ.ಸರೋಜಾದೇವಿ ವಿರೋಧವಾಗಿ ಹಾಗೂ ಆಕೆಯ ಪರವಾಗಿ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಪ್ರತ್ಯೇಕವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದು ಅಧಿಕಾರಿಗಳ ಪ್ರಭಾವದ ಬಗ್ಗೆಯೂ ಕುತೂಹಲ ಹುಟ್ಟುಹಾಕಿದೆ.

ಪ್ರಭಾರ ಅಧಿಕಾರಿಯಾಗಿ ನೇಮಕವಾಗಿರುವ ಬಾಲಕೃಷ್ಣ ಅವರಿಗೆ ಅಧಿಕಾರ ಹಸ್ತಾಂತರ ಮಾಡದೆ ಸತಾಯಿಸುತ್ತಿರುವ ಎ.ಸರೋಜಾದೇವಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಗರದಲ್ಲಿ ಬುಧವಾರ ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿಯಾಗಿ ಎ.ಸರೋಜಾದೇವಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದು ಇವರಿಗೆ ಕೇಂದ್ರ ಕಚೇರಿ ಪ್ರಭಾರ ಜಿಲ್ಲಾ ವ್ಯವಸ್ಥಾಪಕರ ಹುದ್ದೆ ನೀಡಲಾಗಿತ್ತು. ಅವರ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ಕ್ರಮಕ್ಕೆ ಸೂಚಿಸಲಾಗಿದ್ದರೂ, ಸ್ಥಾನ ಬಿಟ್ಟುಕೊಡದೆ ಮೇಲಧಿಕಾರಿ ಆದೇಶಕ್ಕೆ ಸೆಡ್ಡು ಹೊಡೆದಿದ್ದಾರೆ ಎಂದರು.

ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿದರು. ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಆಟೋ ಶಿವರಾಜ್, ದಲಿತ ಸಂಘರ್ಷ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಟಿ.ಸಿ.ಸುರೇಶ್, ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಗೋವಿಂದರಾಜ್, ದಸಂಸ ನಗರ ಅಧ್ಯಕ್ಷ ಎಸ್.ಲಕ್ಷ್ಮೀನಾರಾಯಣ ಮತ್ತಿತರರು ಇದ್ದರು.

ಹುದ್ದೆಯಲ್ಲಿ ಮುಂದುವರಿಸಿ:

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜಾದೇವಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತ ಮುಖಂಡರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲಗೆ ಮನವಿ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜಾದೇವಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತ ಮುಖಂಡರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲಗೆ ಮನವಿ ಸಲ್ಲಿಸಿದರು.

ಹುದ್ದೆಯಲ್ಲಿ ಎ.ಸರೋಜಾದೇವಿ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಎ.ಸಿ.ಕೆಂಪರಾಜು ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜಾದೇವಿ ಅವರನ್ನು ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಪ್ರಭಾರ ಅಧಿಕಾರಿಯಾಗಿ ನೇಮಕವಾಗಿರುವ ಬಾಲಕೃಷ್ಣ ಸಾಕಷ್ಟು ಕಾರ್ಯದ ಒತ್ತಡದಲ್ಲಿ ಕರ್ತವ್ಯ ನಿರ್ವವಹಿಸುತ್ತಿದ್ದು ಅವರಿಗೆ ಹೆಚ್ಚುವರಿ ಹುದ್ದೆ ನೀಡಿರುವುದು ಸರಿಯಲ್ಲ ಎಂದರು.

ಸೇನೆ ತಾಲೂಕು ಅಧ್ಯಕ್ಷ ಜಿ.ಕೆ.ಮಂಜುನಾಥ್, ಗುಬ್ಬಿ ತಾಲೂಕು ಅಧ್ಯಕ್ಷ ಎಂ.ಡಿ.ಶಿವಣ್ಣ, ಕೊರಟಗೆರೆ ಮಾರುತಿ, ಕುಣಿಗಲ್ ಮಂಜುನಾಥ್, ಆಟೋ ಘಟಕದ ನಗರ ಉಪಾಧ್ಯಕ್ಷ ಶಿವರಾಜ್, ಅಂಜಿನಪ್ಪ, ಆರ್.ಸಿ.ಗೋಪಾಲ್, ಡಿಎಸ್‌ಎಸ್ ಮಹಿಳಾ ಜಿಲ್ಲಾಧ್ಯಕ್ಷೆ ರತ್ನಮ್ಮ ಮತ್ತಿತರರು ಇದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜಾದೇವಿ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net