ಸಮ್ಮೇಳನಗಳು ಕನ್ನಡದ ನುಡಿ ಜಾತ್ರೆಯಾಗಲಿ

7KDR2 kasapa
ಕಡೂರಿನಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ವಿದುಷಿ ಡಾ. ವಿಜಯಲಕ್ಷ್ಮೀ ಅವರನ್ನು ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು ಆಹ್ವಾನಿಸಿದರು. ಸೂರಿ ಶ್ರೀನಿವಾಸ್, ಹನುಮಂತಪ್ಪ, ಪರಮೇಶ್, ಲತಾ ಮತ್ತಿತರರಿದ್ದರು.
Published on

ಕಡೂರು: ಸಾಹಿತ್ಯ ಸಮ್ಮೇಳನಗಳು ಕನ್ನಡದ ನುಡಿ ಜಾತ್ರೆಗಳಾಗಬೇಕು. ಆಗ ಮಾತ್ರ ಅವುಗಳ ಮೇಲೆ ಒಲವು ಬೆಳೆಯಲು ಸಾಧ್ಯ ಎಂದು 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ವಿದುಷಿ ಡಾ. ವಿಜಯಲಕ್ಷ್ಮೀ ತಿಳಿಸಿದರು.

ಪಟ್ಟಣದ ಸ್ವಗೃಹದಲ್ಲಿ ಸಮ್ಮೇಳನದ ಆಹ್ವಾನ ಸ್ವೀಕರಿಸಿ ಮಾತನಾಡಿ, ನನಗೆ ಬೇರೆ ಕಡೆ ಇತರ ಪ್ರಶಸ್ತಿಗಳು ಲಭಿಸಿದರೂ ಇದು ನನ್ನ ತವರು ಮನೆಯ ಉಡುಗೊರೆ. ಹಾಗಾಗಿ ಇದನ್ನು ಅತ್ಯಂತ ಪ್ರೀತಿಯಿಂದ ಆಸ್ತೆಯಿಂದ ಸ್ವೀಕರಿಸಿದ್ದೇನೆ. ತಾವೆಲ್ಲರೂ ಕೂಡಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇನೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೊಡ್ಡ ಪಟ್ಟಣಗೆರೆಯ ಕಟ್ಟೆ ಹೊಳೆಯಮ್ಮ ಜಾತ್ರಾ ಮೈದಾನದಲ್ಲಿ ಅ.12ರಂದು ಏರ್ಪಡಿಸಿದ್ದು ಈ ಸಮ್ಮೇಳನಕ್ಕೆ ವಿದ್ವಾಂಸರಾದ ಡಾ. ವಿಜಯಲಕ್ಷ್ಮೀ ಅವರ ಆಯ್ಕೆ ಹೆಚ್ಚು ಮಹತ್ವವನ್ನು ತಂದುಕೊಟ್ಟಿದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ ಮಾತನಾಡಿ, ನಮ್ಮ ಭಾಗದಲ್ಲಿ ಇದೇ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇದನ್ನು ಅತ್ಯಂತ ಯಶಸ್ವಿಯಾಗಿ ನಮ್ಮ ಭಾಗದ ಎಲ್ಲ ಗ್ರಾಮಸ್ಥರು ಕೂಡಿ ಯಶಸ್ವಿಗೊಳಿಸುತ್ತೇವೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕನಲ್ಲೂರು ಎಸ್.ಪರಮೇಶ್ ಮಾತನಾಡಿ, ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹಾಗೂ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಎರಡು ಗೋಷ್ಠಿಗಳನ್ನು ಆಯೋಜಿಸಿದ್ದು ಅದರಲ್ಲಿ ಪ್ರಮುಖವಾಗಿ ಅನ್ನದಾತರ ಅಳಲು ಕೃಷಿ ಗೋಷ್ಠಿಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾರಾಯಣಪುರ ಮಾತನಾಡಲಿದ್ದಾರೆ.

ವರ್ತಮಾನದಲ್ಲಿ ಮಹಿಳೆ ಸ್ತ್ರೀ ಅಂದು, ಇಂದು, ಮುಂದು ವಿಷಯ ಕುರಿತಂತೆ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಅಜ್ಜಂಪುರ ಎಸ್. ಶ್ರುತಿ ಪ್ರಬಂಧ ಮಂಡಿಸಲಿದ್ದಾರೆ. ಜಾನಪದ ಗೋಷ್ಠಿಯ ಉದ್ಘಾಟನೆಯನ್ನು ರಾಜ್ಯ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಜಾನಪದ ಬಾಲಾಜಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾರೋಪ ನುಡಿಯನ್ನು ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು ತಾಲೂಕಿನ ವಿವಿಧ ಗಣ್ಯರ ಸಾಧನೆಯನ್ನು ಗುರುತಿಸಿ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುವುದು ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ.ಪ್ರಕಾಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲತಾ ರಾಜಶೇಖರ್, ಯುವ ಘಟಕದ ಅಧ್ಯಕ್ಷ ಚೇತನ್‌ಕುಮಾರ್ ಹಾಗೂ ಪುರಸಭಾ ಸದಸ್ಯರಾದ ಮರುಗುದ್ದಿ ಮನು, ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಗೋವಿಂದಸ್ವಾಮಿ, ರವಿಚಂದ್ರ, ಮಧು ಪ್ರಿಯಾಂಕ, ಸರಸ್ವತಿಪುರ ಮಂಜುನಾಥ್, ಕೆ.ಜಿ.ವಸಂತಕುಮಾರ್ ಕಲ್ಲೇಶಪ್ಪ, ಸಿಂಗಟಗೆರೆ ಸಿದ್ದಪ್ಪ, ಲೋಕೇಶ್, ಕೃಷ್ಣಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net