ಸಮೀಕ್ಷೆಯಲ್ಲಿನ ಲೋಪ-ದೋಷ ಸರಿಪಡಿಸಿ

ctd bovi sriii
Published on

ಚಿತ್ರದುರ್ಗ: ಒಳ ಮೀಸಲು ಜಾರಿಗಾಗಿ ನಡೆಸುತ್ತಿರುವ ಪರಿಶಿಷ್ಟ ಜಾತಿ ಸಮುದಾಯದವರ ಸಮೀಕ್ಷೆಯಲ್ಲಿನ ಲೋಪ-ದೋಷ ಪರಿಹರಿಸಿ ನಿಖರ ಗಣತಿಗೆ ಕ್ರಮ ವಹಿಸಬೇಕೆಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದ ನಿಯೋಗ ಏಕ ಸದಸ್ಯ ವಿಚಾರಣಾ ಆಯೋಗದ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಅವರನ್ನು ಒತ್ತಾಯಿಸಿದೆ.

ಮಂಗಳವಾರ ಬೆಂಗಳೂರಲ್ಲಿ ನಾಗಮೋಹನ್‌ದಾಸ್ ಅವರಿಗೆ ಮನವಿ ಸಲ್ಲಿಸಿದ ಶ್ರೀಗಳು, ಜಾತಿ ಕಾಲಂನಲ್ಲಿ ಆದಿ -ಕರ್ನಾಟಕ, ಆದಿ-ದ್ರಾವಿಡ, ಆದಿ-ಆಂಧ್ರ ಎಂದು ಕಡ್ಡಾಯ ಆಯ್ಕೆ ನಂತರ ಉಪ ಜಾತಿಯನ್ನಾಗಿ ಭೋವಿ-ವಡ್ಡರ ಆಯ್ಕೆ ಮಾಡಬಹುದೆಂದು ಗಣತಿದಾರರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಹಾಗೂ ಅದೇ ರೀತಿ ನೋಂದಾಯಿಸುತ್ತಿದ್ದಾರೆ. ವಲಸೆ ಕುಟುಂಬಗಳು ಆಧಾರ್‌ಸಂಖ್ಯೆಯೊಂದಿಗೆ ಗಣತಿದಾರರಿಗೆ ಪೋನ್‌ನಲ್ಲಿ ತಿಳಿಸಿದರೂ ಪೋಟೋಬೇಕೆಂಬ ಕಾರಣವೊಡ್ಡಿ ಗಣತಿಗೆ ಮಾಹಿತಿ ಪರಿಗಣಿಸುತ್ತಿಲ್ಲವೆಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಡಿತರ ಚೀಟಿ ಅಥವಾ ಆಧಾರ್‌ಕಾರ್ಡ್ ಪಡೆದು ಸಮೀಕ್ಷೆ ನಡೆಸಬಹುದು. ಆದರೆ, ಕೆಲವು ಕಡೆ ಗಣತಿದಾರರು ಪಡಿತರ ಚೀಟಿ ಮಾತ್ರ ಪಡೆದು ಸಮೀಕ್ಷೆ ನಡೆಸುತ್ತಿದ್ದಾರೆ. ಅದರಲ್ಲಿ ಹೆಸರಿಲ್ಲದವರ ಮಾಹಿತಿ ತಿರಸ್ಕರಿಸುತ್ತಿದ್ದಾರೆ. ಹೊಸದಾಗಿ ವಿವಾಹವಾಗಿರುವ, ಹೊಸದಾಗಿ ಮನೆ ಕಟ್ಟಿಕೊಂಡಿರುವ ಅಥವಾ ಬೇರೆ ಇರುವ ಕುಟುಂಬಗಳ ಮಾಹಿತಿಯನ್ನು ಗಣತಿದಾರರು ತೆಗೆದುಕೊಳ್ಳುತ್ತಿಲ್ಲ.

ಆಯೋಗವು ಭೋವಿ ಪದಕ್ಕೆ ಪರಿಶಿಷ್ಟ ಜಾತಿ ಕೋಡ್ ಸಂಖ್ಯೆ 23.1 ಎಂದು ಅವಕಾಶ ನೀಡಿದ್ದರೂ ಕೆಲವು ಕಡೆ ಎಸ್‌ಸಿ ಅಲ್ಲದವರೆಂದು(ಘೆಟ್ಞ ಖ್ಚ)ಸಮೀಕ್ಷೆಯಿಂದ ದೂರ ಉಳಿಸಲಾಗುತ್ತಿದೆ.

ಪಡಿತರ ಚೀಟಿ ಇರುವ ಕೆಲವು ಕುಟುಂಬದವರನ್ನು ಎಸ್‌ಸಿ ಇದ್ದರೂ ಎಸ್‌ಟಿ ಎಂದು, ವೋಟರ್‌ಐಡಿ ಇದ್ದರೂ ಇಲ್ಲಿನ ನಿವಾಸಿಗಳು ಅಲ್ಲವೆಂದು ಆನ್‌ಲೈನ್‌ನಲ್ಲಿ ತೋರಿಸುತ್ತಿರುವುದಾಗಿ ಗಣತಿದಾರರು ಹೇಳುತ್ತಿದ್ದಾರೆ. ಆಧಾರ್‌ಕಾರ್ಡ್ ವಿಳಾಸದಲ್ಲಿ ಕರ್ನಾಟಕ ಎಂದಿದ್ದರೂ ಬೇರೆ ರಾಜ್ಯದವರೆಂದು ಕೈಬಿಡಲಾಗುತ್ತಿದೆ. ಪರಿಣಾಮಕಾರಿ ಸಮೀಕ್ಷೆಗೆ ಸಿಬ್ಬಂದಿಗೆ ಮತ್ತೊಮ್ಮೆ ತರಬೇತಿ ನೀಡಬೇಕು ಎಂದು ಕೋರಿದ್ದಾರೆ.

ಕೆಲ ಸಿಬ್ಬಂದಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನಮೂದಿಸುತ್ತಿದ್ದಾರೆ ಎಂದು ಆರೋಪಿಸಿರುವ ಶ್ರೀಗಳು, ಈ ದೂರುಗಳ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಮೀಕ್ಷೆ ಕಾಲ ಮಿತಿ ವಿಸ್ತರಿಸಬೇಕು. ಆದಿ ಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಎಂದು ಜಾತಿ ಗುರುತಿಸಿದಾಗ ಉಪಜಾತಿ ಕಾಲಂನಲ್ಲಿ ಭೋವಿ-ವಡ್ಡರಿಗೆ ಸಂಬಂಧಿಸಿದ ಯಾವುದೇ ಜಾತಿಗಳನ್ನು ತೋರಿಸದಂತೆ ಸದರಿ ಕಾಲಂನ್ನು ಅಭಿವೃದ್ಧಿಪಡಿಸುವುದೂ ಸೇರಿ ಸಮೀಕ್ಷೆ ನ್ಯೂನತೆಗಳನ್ನು ಸರಿಪಡಿಸಿ ಗಣತಿ ನಡೆಸುವಂತೆ ಶ್ರೀಗಳು ಒತ್ತಾಯಿಸಿದ್ದಾರೆ. ರಾಜ್ಯಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ, ಮಾಜಿ ಸದಸ್ಯ ಕಾಳಘಟ್ಟ ಹನುಮಂತಪ್ಪ, ನಿವೃತ್ತ ನ್ಯಾಯಮೂರ್ತಿ ವೆಂಕಟೇಶ್, ಹಾವೇರಿ ರವಿ ಪೂಜಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net