ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ

Dr BR Ambedkar
Published on

ಒಳಮೀಸಲಾತಿ ಸಮೀಕ್ಷೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ, ಮೊಬೈಲ್ ಆ್ಯಪ್‌ನಲ್ಲಿನ ತಾಂತ್ರಿಕ ಗೊಂದಲಗಳನ್ನು ಬಗೆಹರಿಸಿ ಗಣತಿ ನಡೆಸುವಂತೆ ಕರ್ನಾಟಕ ಪರಿಶಿಷ್ಟ ಜಾತಿ ಕೊರಮ, ಕೊರಚ, ಕುರವನ್, ಕೇಪ್ ಮಾರಿಸ್ ವೈಜ್ಞಾನಿಕ ಒಳಮೀಸಲಾತಿ ಅನುಷ್ಠಾನ ಹೋರಾಟ ಸಮಿತಿ ಒತ್ತಾಯಿಸಿದೆ.

ಸಮೀಕ್ಷೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಮನೆ ಭೇಟಿ ನೀಡುತ್ತಿರುವ ಸಿಬ್ಬಂದಿಗೆ ಸೂಕ್ತ ಮಾಹಿತಿಯಿಲ್ಲ. ಇದರಿಂದ ಕೊರಮ ಸಮುದಾಯಕ್ಕೆ ಹೆಚ್ಚು ಅನ್ಯಾಯವಾಗುತ್ತಿದೆ. ಸರ್ವರ್ ಡೌನ್ ಸಮಸ್ಯೆಯೂ ಕಾಡುತ್ತಿದ್ದು, ಒಂದು ಮನೆಯ ಸಮೀಕ್ಷೆ ಮಾಡಲು ಮೂರು ದಿನವಾದರೂ ಸಾಧ್ಯವಾಗುತ್ತಿಲ್ಲ ಎಂದು ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಡಿ.ಎಬ್.ಮುತ್ತುರಾಜ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸಮೀಕ್ಷೆ ಮಾಡುವವರು ಆದಿ ಕರ್ನಾಟಕ ಜಾತಿಯ ಉಪಜಾತಿಯಾಗಿ ಕೊರಮ ಸಮುದಾಯವನ್ನು ಪರಿಗಣಿಸುತ್ತಿದ್ದಾರೆ. ಆದರೆ ಕೊರಮ, ಕೊರಚ ಜಾತಿ ಪ್ರತ್ಯೇಕ ಕಲಂ 054.1 ರಲ್ಲಿ ಇದ್ದು, ಅದನ್ನೇ ಪರಿಗಣಿಸಬೇಕು. ಆದರೆ, ಗಣತಿದಾರರು ಈ ಕಲಂ ಹುಡುಕುವುದರಲ್ಲಿ ನಿರ್ಲಕ್ಷೃ ವಹಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ತರಬೇತಿಯನ್ನು ಸರ್ಕಾರ ನೀಡಬೇಕು. ಸಮುದಾಯವೂ ಎಚ್ಚರಿಕೆಯಿಂದ ಮಾಹಿತಿ ನೀಡಿ ದೃಢೀಕರಿಸಿಕೊಳ್ಳಬೇಕು. ಇಲ್ಲದಿದ್ದರೆ ಸಮೀಕ್ಷೆಯೂ ಅರ್ಥಹೀನವಾಗಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೊರಮ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಶಾಂತರಾಜು, ಸದಸ್ಯರಾದ ಪಿ.ನಾಗರಾಜ್, ಶೇಷಾದ್ರಿ, ಸತೀಶ್ ಬಸಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net