ಸಮೀಕ್ಷೆ ನಡೆಸಿ ಹಕ್ಕುಪತ್ರ ಸಮಸ್ಯೆ ಪರಿಹರಿಸುವೆ

16 HDK 01
Published on

ಎಚ್.ಡಿ.ಕೋಟೆ: ಕಂದಾಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯ ಮತ್ತು ಕಂದಾಯ ಭೂಮಿಯ ಜಂಟಿ ಸಮೀಕ್ಷೆ ನಡೆಸುವ ಮೂಲಕ ಕಾನೂನು ವ್ಯಾಪ್ತಿಯಲ್ಲಿ ಹಕ್ಕುಪತ್ರದ ಸಮಸ್ಯೆ ಪರಿಹರಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ತಾಲೂಕಿನ ಜಂಗಲ್ ಲಾಡ್ಜ್ ರೆಸಾರ್ಟ್‌ನಲ್ಲಿ ಶನಿವಾರ ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ 12 ಕುಟುಂಬಗಳು ಅರಣ್ಯ ವಾಸಿಗಳು ಎಂಬ ಬಗ್ಗೆ ಇರುವ ಗೊಂದಲದ ಕುರಿತಂತೆ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಲು ಶೀಘ್ರವೇ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಭೆ ನಡೆಸಿ, ಇಂತಹ ಸಮಸ್ಯೆ ಇರುವ ರಾಜ್ಯದ ಎಲ್ಲ ಹಾಡಿ, ಮುಳುಗಡೆ ಪ್ರದೇಶದ ಸಂತ್ರಸ್ತರ ಜಮೀನುಗಳ ಕುರಿತಂತೆ ಸಮಾಲೋಚಿಸುವುದಾಗಿ ಸಚಿವರು ತಿಳಿಸಿದರು.

ಕ್ಷೇತ್ರದಲ್ಲಿ ಆನೆಗಳ ಹಾವಳಿ ಇದ್ದು, ಕನಿಷ್ಠ 72 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವಂತೆ ಶಾಸಕ ಅನಿಲ್ ಚಿಕ್ಕಮಾದು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಒಂದೇ ವರ್ಷದಲ್ಲಿ 72 ಕಿಲೋಮೀಟರ್ ಒಂದೇ ಭಾಗದಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಕಬಿನಿ ವ್ಯಾಪ್ತಿಯ ಅಂತರಸಂತೆ ಅರಣ್ಯ ಪ್ರದೇಶದಲ್ಲಿ ಸೌರಬೇಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪರಿಶೀಲಿಸಿದ್ದಾಗಿ ತಿಳಿಸಿದ ಸಚಿವರು, ಇದೇ ಸಂದರ್ಭದಲ್ಲಿ ಅರಣ್ಯದಲ್ಲೇ ವಾಸಿಸುವ ಆದಿವಾಸಿಗಳ ಸಮಸ್ಯೆಯನ್ನು ಆಲಿಸಿದ್ದಾಗಿ ಹೇಳಿದರು.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅವರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಅರಣ್ಯ ಭೂಮಿಗೆ ಪರ್ಯಾಯವಾಗಿ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಸಚಿವರು ಪರಿಶೀಲಿಸಿ 3 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ 1980ಕ್ಕಿಂತ ಮೊದಲು ಉಳಿಮೆ ಮಾಡುತ್ತಿರುವ ಮತ್ತು ಮನೆ ಕಟ್ಟಿಕೊಂಡು ಮೂರು ತಲೆಮಾರಿನಿಂದ ವಾಸಿಸುತ್ತಿರುವವರಿಗೆ ಮಾತ್ರ ಪರಿಹಾರ ಒದಗಿಸುವ ಸಂಬಂಧ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿದ್ದರೆ ಪರಿಶೀಲಿಸಿ ಎಂದು ಸೂಚಿಸಿದರು.
ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್ ಸಭೆಯಲ್ಲಿ ಪಾಲ್ಗೊಂಡು ಅರಣ್ಯಹಕ್ಕು ಕಾಯ್ದೆ ಕುರಿತಂತೆ ಇರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಹಿರಿಯ ಐಎಎಸ್ ಅಧಿಕಾರಿಗಳಾದ ರಂಗರಾವ್, ಕುಮಾರ್‌ಪುಷ್ಕರ್, ರಮೇಶ್ ಕುಮಾರ್, ಹರ್ಷಕುಮಾರ್, ತಹಸೀಲ್ದಾರ್ ಸಣ್ಣರಾಮಪ್ಪ ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net