

ಬ್ಯಾಡಗಿ : ಕನಕದಾಸರ ಜೀವನದ ಘಟನೆಗಳು ಸಮಾಜದಲ್ಲಿ ಹೆಚ್ಚು ಪ್ರಭಾವ ಬೀರಿದ್ದು, ಸಾಹಿತ್ಯ ಹಾಗೂ ಕವಿತೆಗಳು ಶ್ರೇಷ್ಠ ಸಂದೇಶ ಸಾರುತ್ತಿವೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಶ್ರೀಗಳು ತಿಳಿಸಿದರು. ತಾಲೂಕಿನ ಕಾಗಿನೆಲೆ ಗ್ರಾಮದ ಗುರುಪೀಠದಲ್ಲಿ 533ನೇ ಕನಕ ಜಯಂತ್ಯುತ್ಸವ ಹಾಗೂ 20ನೇ ರಥೋತ್ಸವ ಅಂಗವಾಗಿ ಜರುಗಿದ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಜರುಗುವ ಜಾತ್ರೆಯಲ್ಲಿ ಪಾಲ್ಗೊಳ್ಳುವ ನಾವು ಬದುಕನ್ನು ಮಾರ್ಪಡಿಸಿಕೊಳ್ಳುವ ಉತ್ತಮ ನಿರ್ಧಾರ ಮಾಡಬೇಕಿದೆ. ಸಮಾಜಕ್ಕೆ ನಾವು ಮಾಡಬೇಕಿರುವ ಕೆಲಸ ಸಾಕಷ್ಟಿದ್ದು, ಜನರ ಹಿತವನ್ನು ಎಲ್ಲರೂ ಬಯಸಬೇಕು. ದಾಸರು ತಮ್ಮ ವಾಣಿಯಲ್ಲಿ ತಿಳಿಸಿರುವಂತೆ ಮೇಲು ಕೀಳೆಂಬ ಭಾವನೆ ದೂರವಾಗಿ, ಸಮಾನತೆ ತತ್ವ್ತವನ್ನು ಅನುಸರಿಬೇಕಿದೆ. ಈ ನಿಟ್ಟಿನಲ್ಲಿ ಕನಕ ಗುರುಪೀಠ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರಕ್ಕೆ ಒತ್ತು ನೀಡುತ್ತಿದೆ. ಇದರೊಟ್ಟಿಗೆ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿದೆ ಎಂದರು. ಮಠಮಾನ್ಯಗಳಿಂದ ಉತ್ತಮ ಸಂದೇಶಗಳು ಸಮಾಜಕ್ಕೆ ನೀಡಿದಾಗ ಪರಿವರ್ತನೆ ಸಾಧ್ಯವಾಗಲಿದ್ದು, ಮಠಾಧೀಶರು ಜನಪರ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು ಎಂದರು.
ಜಾತ್ರೆ ಅಂಗವಾಗಿ ಭಕ್ತರು ಇಲ್ಲಿನ ರೇವಣಸಿದ್ಧೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾಸಿದ್ಧ್ದೇವರು, ಕನಕಾಧಿಕೇಶವ ದೇವರುಗಳ ದರ್ಶನ ಪಡೆದು, ರಥೋತ್ಸವದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಶಾಸಕರಾದ ವೀರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಕುರುಬರ ಸಮಾಜದ ಜಿಲ್ಲಾಧ್ಯಕ್ಷ ಮಾರುತಿ ಹರಿಹರ, ಗುರುಪೀಠದ ಮುಖ್ಯಸ್ಥರಾದ ಎಸ್.ಎಫ್.ಎನ್. ಗಾಜೀಗೌಡ್ರ, ಜಿ.ಪಂ. ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ರಾಜೇಂದ್ರ ಹಾವೇರಣ್ಣನವರ, ಸ್ಥಳೀಯರಾದ ಮಾಲತೇಶ ಬಣಕಾರ, ಸದಾನಂದಣ್ಣ ಗೌಡರ, ಅಮೋಘಸಿದ್ಧೇಶ್ವರ ಶ್ರೀಗಳು, ಪ್ರೊ. ಎಂ. ಬೀರಪ್ಪ ಹಾಗೂ ಎಸ್.ಸಿ. ಬನ್ನಿಮಟ್ಟಿ ಇದ್ದರು.</