

ಎಚ್.ಡಿ.ಕೋಟೆ: ವಿಶ್ವಕರ್ಮ ಸಮಾಜದವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದರಲ್ಲೂ ಅಮರಶಿಲ್ಪಿ ಜಕಣಾಚಾರಿ ಕೈಚಳಕದಿಂದ ನಿರ್ಮಿಸಿದ ದೇವಾಲಯಗಳು ಅವರ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿವೆ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಕಣಾಚಾರಿ ಅವರು ಪ್ರಸಿದ್ಧ ಬೇಲೂರು, ಹಳೇಬೀಡು, ಸೋಮನಾಥಪುರ ಸೇರಿದಂತೆ ಹಲವಾರು ದೇವಾಲಯಗಳನ್ನು ಸೂಕ್ಷ್ಮ ಕೆತ್ತನೆಯ ಮೂಲಕ ನಾಡಿಗೆ ಸಮರ್ಪಿಸಿದ್ದಾರೆ. ವಿಶ್ವಕರ್ಮ, ಅಮರ ಶಿಲ್ಪಿ ಜಕಣಾಚಾರಿ ಮಹನೀಯರ ಸ್ಮರಣೆಯ ದಿನವನ್ನು ಎಲ್ಲರೂ ಒಟ್ಟಾಗಿ ಸೇರಿ ಆಚರಿಸಬೇಕು ಎಂದರು.
ಶಿಕ್ಷಕ ರಮೇಶ್ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ತಮ್ಮ ಬಹುತೇಕ ಜೀವಿತ ಅವಧಿಯಲ್ಲಿ ದೇವಾಲಯಗಳ ನಿರ್ಮಾಣಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಅವರ ಕೌಶಲವನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ. ಇಂತಹ ದೇವಾಲಯಗಳನ್ನು ನಾವು ಸಂರಕ್ಷಣೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ರತ್ನಾಂಬಿಕಾ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಸಮಿತಿ ಅಧ್ಯಕ್ಷ ಚನ್ನಚಾರ್, ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ತಾಲೂಕು ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಬಡಗಲಪುರ ವೆಂಕಟೇಶ್, ಸೋಮಚಾರ್, ಹೊಸಹಳ್ಳಿ ಸಿದ್ದಪ್ಪಾಜಿ, ಜಿ.ರವಿ, ಮೂರ್ತಚಾರ್, ಹೈರಿಗೆ ಸಿದ್ದಪ್ಪಾಜಿ, ರಾಜು, ಬೆಳಗನಹಳ್ಳಿ ವೆಂಕಟೇಶ್, ಗ್ರೇಡ್ 2 ತಹಸೀಲ್ದಾರ್ ಸಣ್ಣ ರಾಮಪ್ಪ, ಡಾ.ಪೂರ್ಣಾನಂದ, ಗೋಪಾಲಕೃಷ್ಣ ಮೂರ್ತಿ, ಮಹಾದೇವಯ್ಯ, ನಂಜರಾಜು, ಗುರುಮೂರ್ತಿ, ಬಸವರಾಜು ಇದ್ದರು.