ಸಮಾಜ ವಿರೋಧಿ ಪೋಸ್ಟ್ಗಳ ಮೇಲೆ ಹದ್ದಿನ ಕಣ್ಣು

Crime Logo
Published on

ವರುಣ ಬಳಿ ಇತ್ತೀಚೆಗೆ ನಡೆದ ಕೊಲೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಹದಗೆಡುವ ರೀತಿ ಪೋಸ್ಟ್ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಎಚ್ಚರಿಕೆ ನೀಡಿದ್ದಾರೆ.

ಮೇ 5ರಂದು ಮೈಸೂರು ಹೊರವಲಯದಲ್ಲಿನ ವರುಣ ಬಳಿ ಕಾರ್ತಿಕ್ ಎಂಬ ರೌಡಿಶೀಟರ್ ಕೊಲೆಯಾಗಿದ್ದು, ಈ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಇದಾದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಹತ್ಯೆಯಾದ ಕಾರ್ತಿಕ್ ಅವರ ಪರ-ವಿರೋಧ ಚರ್ಚೆಯ ಜತೆಗೆ ಓಪನ್ ಚಾಲೆಂಜ್‌ನ ಪೋಸ್ಟ್‌ಗಳನ್ನು ಹರಿಬಿಡಲಾಗುತ್ತಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ಯಾರಾದರೂ ಪೋಸ್ಟ್ ಹಾಕಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಶೇಷ ತಂಡ ರಚನೆ:

ಈಗಾಗಲೇ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ಪೋಸ್ಟ್ಗಳನ್ನು ಹಾಕಿದ್ದ 15ಕ್ಕೂ ಹೆಚ್ಚು ಜನರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಪೊಲೀಸರು, ಈ ರೀತಿಯ ಪೋಸ್ಟ್ಗಳನ್ನು ಯಾರೂ ಹಾಕದಂತೆ ಎಚ್ಚರಿಕೆ ವಹಿಸಿದ್ದಾರೆ. ಇದಕ್ಕಾಗಿಯೇ 52 ಪೊಲೀಸರನ್ನು ಒಳಗೊಂಡ ಸೋಷಿಯಲ್ ಮೀಡಿಯಾ ಮಾನಿಟರ್ ತಂಡವನ್ನು ನಿಯೋಜಿಸಲಾಗಿದ್ದು, ಈ ತಂಡ ಪ್ರತಿ ನಿತ್ಯವೂ ಮಾನಿಟರ್ ಮಾಡುತ್ತಿದೆ. ಜತೆಗೆ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಸಮಾಜ ವಿರೋಧಿ ಪೋಸ್ಟ್ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ರೌಡಿ ಪೆರೇಡ್ ನಡೆಸಲಾಗಿದ್ದು, ಪ್ರತಿ 15 ದಿನಕ್ಕೊಮ್ಮೆ ರೌಡಿಗಳ ಪೆರೇಡ್ ನಡೆಸಲಾಗುತ್ತಿದೆ. ರೌಡಿಶೀಟರ್‌ಗಳ ಮೇಲೂ ಹೆಚ್ಚಿನ ನಿಗಾ ವಹಿಸಿದ್ದೇವೆ ಎಂದರು.

ಏನಿದು ಪ್ರಕಟರಣ?

ಮೈಸೂರು ತಾಲೂಕಿನ ವರುಣ ಬಳಿಯ ಲಾಡ್ಜ್ ಎದುರು ಮೈಸೂರು ನಗರದ ರೌಡಿಶೀಟರ್ ಕಾರ್ತಿಕ್ ಎಂಬಾತನನ್ನು ಆತನ ಸ್ನೇಹಿತನೇ ಆಗಿದ್ದ ಅವಿನಾಶ್ ಮತ್ತು ಆತನ ತಂಡ ಬರ್ಬರವಾಗಿ ಹತ್ಯೆ ಮಾಡಿತ್ತು. ಇದಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಮೃತ ಕಾರ್ತಿಕ್ ಸ್ನೇಹಿತರು ಅವಿನಾಶ್ ವಿರುದ್ಧ ಬೆದರಿಕೆ, ಹತ್ಯೆ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ್ದ ಪೊಲಿಸರು ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಆರೋಪಿ ಅವಿನಾಶ್ ಸ್ನೇಹಿತರು ವೈಷಮ್ಯ, ದ್ವೇಷ ಬಿತ್ತುವ ಪೋಸ್ಟ್ ಹಾಕಿದ್ದರು. ಇವರ ವಿರುದ್ಧವೂ ಪೊಲೀಸರು ಕ್ರಮ ಜರುಗಿಸಿದ್ದರು. ಆದರೆ, ಈ ಬೆಳವಣಿಗೆ ಮುಂದುವರಿದಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಯಾವುದೇ ಪೋಸ್ಟ್ ಹಾಕಿದ್ದಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮೆರವಣಿಗೆ ನಡೆಸಿದ್ದವರ ವಿರುದ್ಧ ಕೇಸ್:

ಹತ್ಯೆಯಾದ ರೌಡಿ ಶೀಟರ್ ಕಾರ್ತಿಕ್ ಸಾವಿನ ಮೆರವಣಿಗೆ ನಡೆಸಿ ಸಾರ್ವಜನಿಕರ ಭಯ ಹುಟ್ಟಿಸಿದ್ದ ಆರು ಮಂದಿಯ ವಿರುದ್ಧ ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕಾರ್ತಿಕ್ ಕೊಲೆಯಾದ ಬಳಿಕ ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಪೊಲೀಸರ ಅನುಮತಿ ಪಡೆಯದೇ ಶವ ಯಾತ್ರೆ ನಡೆಸುವ ಮೂಲಕ ಸಾರ್ವಜನಿಕ ಶಾಂತಿ- ನೆಮ್ಮದಿಗೆ ಆರು ಜನ ಭಂಗ ತಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಯುವಕರನ್ನು ಬಂಧಿಸಿ, ಮೆರವಣಿಗೆಗೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net