ಸಮರ್ಪಕ ಕುಡಿವ ನೀರು, ಸ್ಚಚ್ಛತೆಗೆ ತಾಕೀತು

CTD DC MEETING NAYAKANAHATTI------..
Published on

ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ 4 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಡಿಸಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಾತ್ರೆ ಸಿದ್ಧತೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಮಾ.9 ರಿಂದ 24ರವರೆಗೆ ಜಾತ್ರೆ ನಡೆಯಲಿದೆ. 16ರಂದು ದೊಡ್ಡ ರಥೋತ್ಸವವಿದೆ. ಕುಡಿಯುವ ನೀರಿಗೆ ವಿವಿ ಸಾಗರದಿಂದ ಹಾಗೂ ಟ್ಯಾಂಕರ್ ಹಾಗೂ ದಾನಿಗಳ ಬೋರ್‌ವೆಲ್‌ಗಳಿಂದ ನೀರು ಒದಗಿಸುವಂತೆ ಚಳ್ಳಕೆರೆ ತಹಸೀಲ್ದಾರ್, ನಾಯಕನಹಟ್ಟಿ ಪಪಂ ಮುಖ್ಯಾಧಿಕಾರಿಗೆ ನಿರ್ದೇಶಿಸಿದರು. ನೀರಿನ ಮೂಲಗಳ ಸ್ಯಾಂಪಲ್ ಪರೀಕ್ಷಿಸಬೇಕು. ಅಗತ್ಯ ಔಷಧಗಳಿರಬೇಕೆಂದು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್‌ಗೆ ಸೂಚಿಸಿದರು.

ನಾಯಕನಹಟ್ಟಿಗೆ ಜಾತ್ರೆ ಸಮಯದಲ್ಲಿ ಮಾತ್ರವಲ್ಲದೆ ನಿತ್ಯವೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಇದಕ್ಕಾಗಿ ಅಗತ್ಯ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್‌ಗೆ ತಿಳಿಸಿದರು.

ರಥ ಸಾಗಲು ಯಾವುದೇ ಅಡಚಣೆಯಾಗಬಾರದು. ತೇರು ಬೀದಿಯಲ್ಲಿ ಅಂಗಡಿ, ಮುಂಗಟ್ಟುಗಳಿಗೆ ಅವಕಾಶ ನೀಡಬಾರದು. ರಥ ಬೀದಿ ಡಾಂಬರೀಕರಣ ಕಾಮಗಾರಿ ಅಚ್ಚುಕಟ್ಟಾಗಿರ ಬೇಕು. ನಾಯಕನಹಟ್ಟಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ರಸ್ತೆಯ ಇಕ್ಕೆಲಗಳ ಜಂಗಲ್ಕಟಿಂಗ್‌ನೊಂದಿಗೆ ವಾಹನ ಸಂಚಾರ,ಜನರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಬೇಕೆಂದು ಡಿಸಿ ಹೇಳಿದರು.

ಪಟ್ಟಣದ ಕೆರೆಗಳು ತುಂಬಿರುವುದರಿಂದ ಭಕ್ತರು ವುಗಳಿಗೆ ಇಳಿಯದಂತೆ ಬ್ಯಾರಿಕೇಡ್ ಹಾಕಬೇಕು. ಅವಘಡ ತಡೆಗೆ ಎಸ್‌ಡಿಆರ್‌ಎಫ್ ತಂಡ ನಿಯೋಜಿಸಬೇಕು. ರೆಸ್ಕ್ಯೂಬೋಟ್, ಲೈಫ್‌ಜಾಕೆಟ್ ಹಾಗೂ ಅಗ್ನಿಶಾಮಕ ವಾಹನಗಳ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.

ಪಟ್ಟಣದಲ್ಲಿ ಅಗತ್ಯವಿರುವೆಡೆ ಶಾಶ್ವತವಾಗಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಬೇಕು. ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಎನ್. ಕುಮಾರ್ ಅವರಿಗೆ ಸೂಚಿಸಿದರು.

ಚೆಕ್‌ಪೋಸ್ಟ್ ತೆರೆಯಲು, ಪೊಲೀಸ್ ಬಂದೋಬಸ್ತ್, ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್‌ಪಿ ಎಸ್. ಜೆ. ಕುಮಾರಸ್ವಾಮಿ, ಕೆಎಸ್‌ಆರ್‌ಟಿಸಿ ಡಿಸಿ ಶ್ರೀನಿವಾಸ್, ಆರ್‌ಟಿಒ ಭರತ ಎಂ. ಕಾಳಿಸಿಂಗೆ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಂಗಾಧರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net