

ಸಮರ್ಥನಂ ಅಂಗವಿಲಕರ ಸಂಸ್ಥೆಯಿಂದ ಪರಿಸರ ದಿನದ ಅಂಗವಾಗಿ ವಿಜಯನಗರದ 4ನೇ ಹಂತದಲ್ಲಿರುವ ಸಂಸ್ಥೆಯ ಆವರಣದಲ್ಲಿ ಗುರುವಾರ 7ನೇ ವನಮಹೋತ್ಸವ ಆಚರಿಸಲಾಯಿತು. ಬಡಾವಣೆಯ ನಿವಾಸಿಗಳಿಗೆ ಗಿಡ ವಿತರಣೆ ಮಡಲಾಯಿತು. ಜತೆಗೆ ಗಿಡಗಳನ್ನು ನೆಡಲಾಯಿತು.
ಸಂಸ್ಥೆಯ ಮೈಸೂರು ವಿಭಾಗೀಯ ಸಂಯೋಜಕ ಶಿವರಾಜು ಮಾತನಾಡಿ, ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಲ್ಲದ ಸುಂದರ ಜಗತ್ತನ್ನು ಸೃಷ್ಟಿಸುವುದು ವಿಶ್ವ ಪರಿಸರ ದಿನದ ಹಿಂದಿನ ಉದ್ದೇಶವಾಗಿದೆ. ಹೆಚ್ಚು ಮರ-ಗಿಡಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು ಉತ್ತಮ ಪರಿಸರಕ್ಕೆ ನಾವು ಕೊಡಬಹುದಾದ ಕೊಡುಗೆ ಎಂದರು.
ಅಲ್ಲದೆ ನಾವುಗಳು ಯಾವಾಗಲೂ ನಮ್ಮ ಚಟುವಟಿಕೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಆರೋಗ್ಯಕರವಾಗಿರಲು ಶ್ರಮಿಸಬೇಕು. ನಾವು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಮತ್ತು ಎಚ್ಚರಿಕೆಯಿಂದ ಬಳಸಬೇಕು ಎಂದು ತಿಳಿಸಿದರು.
ಸಮಾಗಮ ವೆಲ್ಪೇರ್ ಫೌಂಡೇಷನ್ ಸಂಸ್ಥೆಯ ಪಾಂಡು ಮಾತನಾಡಿ, ಈ ದಿನ ಹಸಿರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ದಿನ. ಆದರೆ ಕಾಡು ಪರಿಸರ ರಕ್ಷಣೆ ಕೇವಲ ಈ ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನ ನಾವು ಮಾಡುವ ಪ್ರತಿ ಕೆಲಸದಲ್ಲೂ ಪರಿಸರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಕಾಡು, ಸ್ವಚ್ಛ ಪರಿಸರ ಎಷ್ಟು ಮುಖ್ಯ ಎಂಬುದನ್ನು ಸದ್ಯ ಇರುವ ಕರೊನಾವೇ ತೋರಿಸಿಕೊಟ್ಟಿದೆ. ನಮ್ಮ ದುರಾಸೆ ಬಿಟ್ಟು, ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.
ಸಮರ್ಥನಂ ಬುದ್ಧಿ ವಿಕಲಚೇತನ ಶಾಲೆ ಮುಖ್ಯಶಿಕ್ಷಕ ಭ್ರಮರಂಬಾ, ಉನ್ನತ ಶಿಕ್ಷಣ ಯೋಜನೆಯ ಸಂಯೋಜಕರಾದ ಚೈತ್ರಕುಮಾರಿ, ಮಾಂತೇಶ್, ವಿಶೇಷ ಶಿಕ್ಷಕರಾದ ಪದ್ಮಾ, ವಿದ್ಯಾವತಿ, ಸ್ವರ್ಶ, ಭುವನ, ಅಜಯ್‌ಕುಮಾರ್, ಮಹಾದೇವು, ಚೇತನ್ ಇತರರಿದ್ದರು.