

ಬೀರೂರು: ನಮ್ಮಲ್ಲಿನ ಜಾತಿ, ಮತ, ಪಂಥಗಳನ್ನು ಬದಿಗೊತ್ತಿ ನಾವೆಲ್ಲರೂ ಸನಾತನ ಹಿಂದು ಧರ್ಮಕ್ಕೆ ಸೇರಿದವರು ಎಂಬುದನ್ನು ಅರಿತು ಧರ್ಮ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಖಾಸಾ ಶಾಖಾ ಪೀಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಬಿ.ಎಚ್.ರಸ್ತೆಯ ಮಠದ ಆವರಣದಲ್ಲಿ ಭಾನುವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾರ್ತಿಕ ದೀಪೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿ, ಮನುಕುಲದ ಉದ್ಧಾರಕ್ಕೆ ಅವತರಿಸಿದ, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಮಾನವೀಯ ಮೌಲ್ಯ ಬಿತ್ತುವ ಮೂಲಕ ವಸುಧೈವ ಕುಟುಂಬಕಂ ಎಂಬ ಸಂದೇಶ ಸಾರಿದವರು ರೇಣುಕರು. ದೇಶದ ಸನಾತನ ಸಂಸ್ಕೃತಿಗೆ ಜಗದ್ಗುರು ರೇಣುಕಾಚಾರ್ಯರ ಹಾಗೂ ಗುರು ಪರಂಪರೆಯ ಕೊಡುಗೆ ಅಪಾರ ಎಂದು ತಿಳಿಸಿದರು.
ಮೇಲು-ಕೀಳೆಂಬ ಭೇದಭಾವಕ್ಕೆ ಆಸ್ಪದ ನೀಡದೆ ಹುಟ್ಟಿನ ಸ್ವಧರ್ಮಪಾಲನೆ ಜತೆ ಹಿಂದು ಧರ್ಮಕ್ಕೆ ಚ್ಯುತಿಯಾಗದ ರೀತಿ ಧರ್ಮಜಾಗೃತಿ ಕಾರ್ಯಕ್ಕೆ ಮುಂದಾಗಬೇಕು. ಅಜ್ಞಾನದ ಕತ್ತಲೆ ಹೋಗಲಾಡಿಸಿ ಜ್ಞಾನದ ಬೆಳಕನ್ನು ಹಚ್ಚುವ ಕೆಲಸ ಗುರುವಿನಿಂದ ಸುಲಭ ಸಾಧ್ಯ. ಕಾರ್ತಿಕ ಮಾಸ ನಮ್ಮೊಳಗಿನ ಅಜ್ಞಾನದ ಕತ್ತಲೆಯನ್ನು ನೀಗಿಸಿ ಜ್ಞಾನ ಮಾರ್ಗದ ಬದುಕನ್ನು ಕಟ್ಟಿಕೊಳ್ಳಲು ಪ್ರೇರಕವಾಗಿದೆ ಎಂದರು.
ಅಂಬರದೇವರಹಳ್ಳಿ ಮಠದ ಉಜನೀಶ್ವರ ಶಿವಾಚಾರ್ಯರು, ಜಗದ್ಗುರು ಶ್ರೀ ರೇಣುಕಾಚಾರ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಕೇಶ್, ಶಿವಾನಂದಾಶ್ರಮ ಟ್ರಸ್ಟ್ ಅಧ್ಯಕ್ಷ ಮರುಳಸಿದ್ದಾರಾಧ್ಯ, ಮಾಳಿಗೆ ಉಮಾಶಂಕರ್, ನಟರಾಜ್, ಸಂಪತ್‌ಕುಮಾರ್, ಶಿಕ್ಷಕ ನಾಗೇಂದ್ರ ಸೇರಿದಂತೆ ಮಠದ ಭಕ್ತರು, ಟ್ರಸ್ಟ್ ಸದಸ್ಯರು ಇದ್ದರು. ಸಾಹಿತಿ, ಚಿಂತಕ ಜಗನ್ನಾಥ್, ಗಂಜಿಕಟ್ಟೆ ಕೃಷ್ಣಮೂರ್ತಿ ಅವರಿಂದ ಹಾಸ್ಯ ಹಾಗೂ ಜಾನಪದ, ತತ್ವಪದಗಳ ಗಾಯನ ನಡೆಯಿತು.