

ಬೆಂಗಳೂರು : ನಗರದಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಐವರು ಶಂಕಿತ ಉಗ್ರರನ್ನು ಶೀಘ್ರದಲ್ಲೇ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಸಿಸಿಬಿ ವಿಚಾರಣೆ ಮುಗಿದಿರುವ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗಾಗಲೇ ಪ್ರಕರಣದ ಬಗ್ಗೆ ಸಿಸಿಬಿಯಿಂದ ಪ್ರಾಥಮಿಕ ಮಾಹಿತಿ ಪಡೆದಿದೆ. ಶಂಕಿತರ ಬಳಿ ಪತ್ತೆಯಾದ ಗ್ರೆನೇಡ್, ನಾಡ ಪಿಸ್ತೂಲ್ಗಳ ಬಗ್ಗೆ ಎನ್‌ಐಎ ನಿಗಾ ಇಟ್ಟಿದ್ದು, ಈ ಹಿನ್ನೆಲೆಯಲ್ಲಿ ಶಂಕಿತ ಉಗ್ರರರನ್ನು ವಶಕ್ಕೆ ಪಡೆದು ಒಳಸಂಚು ಮತ್ತು ಷಡ್ಯಂತ್ರ ಬಗ್ಗೆ ವಿಚಾರಣೆ ನಡೆಸಲಿದೆ.
ವಿದೇಶದಿಂದ ಫಂಡಿಂಗ್ ಮತ್ತು ಗ್ರೆನೇಡ್ ಭಾರತಕ್ಕೆ ಸರಬರಾಜನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಐಎ ಸದ್ಯದಲ್ಲಿಯೇ ಐವರನ್ನು ವಶಕ್ಕೆ ಪಡೆಯಲಿದ್ದಾರೆ. ಅಲ್ಲದೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಜುನೇದ್ ಅಹಮದ್ ಕರೆ ತರುವ ಬಗ್ಗೆ ಕಾನೂನು ಪ್ರಕ್ರಿಯೆ ಕೈಗೊಳ್ಳಲಿದೆ. ಜುನೈದ್ ಪತ್ತೆಗೆ ಸಿಸಿಬಿ ಈಗಾಗಲೇ ಲುಕ್ ಔಟ್ ನೋಟಿಸ್ ಹೊರಡಿಸಿದೆ.
ಜುನೇದ್‌ನನ್ನು ಎನ್‌ಐಎ ಮತ್ತು ಸಿಬಿಐ ಇಂಟರ್‌ಪೋಲ್ ಮೂಲಕ ವಶಕ್ಕೆ ಪಡೆಯಲು ತಯಾರಿ ನಡೆಸಿದೆ. ಎನ್‌ಐಎ ಇನ್ನೂ ಕೆಲವೇ ದಿನಗಳಲ್ಲಿ ಐವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಸಮಗ್ರವಾಗಿ ಮಾಹಿತಿ ಕಲೆ ಹಾಕಲಿದೆ. ಎನ್‌ಐಎ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರೆಂಟ್ ಮೇಲೆ ಶಂಕಿತರನ್ನು ವಶಕ್ಕೆ ಪಡೆಯಲಿದ್ದಾರೆ.
ಏನಿದು ಪ್ರಕರಣ?
ನಗರದ ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ ಜು.೨೦ ರಂದು ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಶಂಕಿತರಾದ ಸುಹೇಲ್ ಅಹಮದ್, ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಮತ್ತು ಮಹಮ್ಮದ್ ಉಮರ್‌ನನ್ನು ಬಂಧಿಸಿದ್ದರು. ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ೧೫ ದಿನಗಳ ಕಾಲ ತೀವ್ರ ವಿಚಾರಣೆ ನಡೆಸಿ ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.