ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಹಾಸನದಲ್ಲಿ ಛಲವಾದಿ ಮಾದಿಗ ಸಂಘಟನೆಗಳಿಂದ ತಮಟೆ ಚಳವಳಿ

IMG-20201013-WA0029.jpg
Published on

ಹಾಸನ:ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಮಂಗಳವಾರ ದಲಿತ ಛಲವಾದಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ ನಡೆಸಲಾಯಿತು.

ಹೇಮಾವತಿ ಪ್ರತಿಮೆಯಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಕೆಲ ಹೊತ್ತು ಮುಷ್ಕರ ನಡೆಸಿದರು.

ದಲಿತರಿಗೆ ಸಕಲ ಸೌಲಭ್ಯ ದೊರೆಯಬೇಕು ಅದು ಸಾಕಾರಗೊಳ್ಳಬೇಕೆಂದರೆ ವರದಿ ಜಾರಿಯಾಗಬೇಕೆಂದು 12 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಸುಪ್ರೀಂ ಕೋರ್ಟ್ ನ್ಯಾ. ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ಇದ್ದ ಅಡ್ಡಿ ಆತಂಕಗಳನ್ನು ದೂರ ಮಾಡಿ, ಒಳ ಮೀಸಲಾತಿ ಕಲ್ಪಿಸಬಹುದೆಂದು ತೀರ್ಪು ನೀಡಿದೆ. ಅಲ್ಲದೆ ರಾಜ್ಯ ಸರ್ಕಾರಗಳಿಗೂ ಈ ಅಧಿಕಾರ ನೀಡಿದೆ. ಇದರಿಂದ ಹೊಲೆಯ, ಮಾದಿಗ, ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದರು.

ದಲಿತ ಮುಖಂಡರಾದ ಹೆತ್ತೂರು ನಾಗರಾಜ್, ಆರ್ಪಿಐ ಸತೀಶ್, ಕೃಷ್ಣದಾಸ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net