

ತರೀಕೆರೆ: ತಾಲೂಕಿನ ಹಾದಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಜಿ.ಯತೀಶ್, ಉಪಾಧ್ಯಕ್ಷರಾಗಿ ಟಿ.ವಿಜಯಕುಮಾರ್ ಅವಿರೋಧ ಆಯ್ಕೆಯಾದರು.
ನೂತನ ಆಡಳಿತ ಮಂಡಳಿ ಅಸ್ವಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಚ್.ಜಿ.ಯತೀಶ್, ಉಪಾಧ್ಯಕ್ಷ ಸ್ಥಾನಕ್ಕೆ ಟಿ.ವಿಜಯನಾಯ್ಕ ಹೊರತಾಗಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪಿಡಿಒ ಎಲ್.ಆರ್.ಈಶ್ವರಯ್ಯ ಇಬ್ಬರ ಅವಿರೋಧ ಆಯ್ಕೆ ಘೋಷಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ನೂತನ ಅಧಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಸಹಕಾರಿ ಕ್ಷೇತ್ರ ಸದೃಢವಾಗಿ ಬೆಳವಣಿಗೆಯಾದರೆ, ಕೃಷಿಕರ ಸಬಲೀಕರಣ ಸುಲಭವಾಗಲಿದೆ. ಎಲ್ಲ ಸದಸ್ಯರು ಒಮ್ಮತದಿಂದ ಸಂಘದ ಪ್ರಗತಿಗೆ ದುಡಿಯಬೇಕು ಎಂದರು.
ಅಧ್ಯಕ್ಷ ಎಚ್.ಜಿ.ಯತೀಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿಂದಿನ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಅವರ ನೇತೃತ್ವದ ಆಡಳಿತ ಮಂಡಳಿ ನೀಡಿದ ಅನುದಾನ ಪಡೆದು ಹೊಸ ಕಟ್ಟಡ ನಿರ್ಮಿಸಲಾಗಿದೆ. ಮುಂದೆ ಉತ್ತಮ ಕಾರ್ಯ ಯೋಜನೆ ರೂಪಿಸಿ ಸಂಘವನ್ನು ಮತ್ತಷ್ಟು ಲಾಭದತ್ತ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಾದಿಕೆರೆ ಪಿಎಸಿಎಸ್ ನಿರ್ದೇಶಕರಾದ ಡಿ.ಸಿ.ಬಸವರಾಜ್, ಲವಕುಮಾರ್, ಪ್ರಸನ್ನಕುಮಾರ್, ಎಚ್.ಕೆ.ನಾಗರಾಜ್, ಅರುಣ್‌ಕುಮಾರ್, ಎಚ್.ಜೆ.ಮಂಜುನಾಥ್, ಗುರುಸಿದ್ದಪ್ಪ, ಪೂಜಾ, ಸಿಇಒ ಅಂಬರೀಷ್ ಮತ್ತಿತರರಿದ್ದರು.
20 ಟಿಕೆಇ 2: ತರೀಕೆರೆ ತಾಲೂಕಿನ ಹಾದಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಯತೀಶ್ ಹಾಗೂ ಟಿ.ವಿಜಯನಾಯ್ಕ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಅಭಿನಂದಿಸಿದರು. ಡಿ.ಸಿ.ಬಸವರಾಜ್, ಪ್ರಸನ್ನಕುಮಾರ್, ಲವಕುಮಾರ್, ಅರುಣ್‌ಕುಮಾರ್ ಇತರರಿದ್ದರು.