

ಬೆಂಗಳೂರು: ಉತ್ತರಿಸಲು ಸಚಿವರಿಲ್ಲ, ಪ್ರಶ್ನೆ ಕೇಳಲು ಶಾಸಕರಿಲ್ಲ, ಬಜೆಟ್ ಭಾಷಣ ಆಲಿಸಲು ಅಧಿಕಾರಿಗಳು ಗ್ಯಾಲರಿಯಲ್ಲಿರಲಿಲ್ಲ. ಇದು ಬುಧವಾರ ವಿಧಾನಸಭೆಯಲ್ಲಿ ಕಾಣಿಸಿದ ದೃಶ್ಯ. ವಿಧಾನ ಪರಿಷತ್ನಲ್ಲಿಯೂ ಇದೇ ಪರಿಸ್ಥಿತಿ ಕಂಡು ಬಂತು. ವಿಧಾನಸಭೆಯಲ್ಲಿ ದಿನದ ಕಲಾಪದ ಆರಂಭದಲ್ಲೇ ಶಾಸಕರ ಕೂರತೆ ಎದ್ದುಕಾಣಿಸಿತು. ಇದನ್ನು ಗಮನಿಸಿದ ಬಸನಗೌಡ ಯತ್ನಾಳ್, ಕೋರಂ ಇಲ್ಲ, ಏಕೆ ಸದನ ನಡೆಸುತ್ತೀರಾ ಎಂದು ಸ್ಪೀಕರ್ ಉದ್ದೇಶಿಸಿ ಪ್ರಶ್ನಿಸಿದರು.
ಬಳಿಕ ಪ್ರಶ್ನೋತ್ತರ ವೇಳೆ ಉತ್ತರ ನೀಡಲು ಸಚಿವ ನಾರಾಯಣಗೌಡ ಇರಲಿಲ್ಲ. ಚುಕ್ಕಿಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಹೆಸರಿದ್ದ ಕೆಲವು ಶಾಸಕರು ಇರಲಿಲ್ಲ. ಇದರಿಂದ ಬೇಸರಗೊಂಡ ಸ್ಪೀಕರ್, ಸದನ ಪ್ರಾರಂಭವಾಗಿ ಇಂದಿಗೆ ನಾಲ್ಕು ದಿನ ಆಯಿತು. ಪ್ರಶೋತ್ತರ ಮತ್ತು ಇತರ ಸಂದರ್ಭಗಳಲ್ಲಿ ಸದನದಲ್ಲಿ ಸಚಿವರು ಕಡ್ಡಾಯವಾಗಿ ಇರಬೇಕೆಂದು ಇದೆ. ಆದರೆ ನಿನ್ನೆ ಮೊನ್ನೆ ಮತ್ತು ಇಂದಿನ ಪರಿಸ್ಥಿತಿ ನೋಡಿದರೆ, ಸದನಕ್ಕೆ ಬಂದರೂ ತೊಂದರೆ ಇಲ್ಲ, ಬರದಿದ್ದರೂ ತೊಂದರೆ ಇಲ್ಲ ಎಂಬ ಮನಸ್ಥಿತಿ ಸದಸ್ಯರಲ್ಲಿ, ಸಚಿವರಲ್ಲಿ ಬಂದರೆ ಈ ವ್ಯವಸ್ಥೆ ಕುಸಿತ ಕಾಣುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಸಚಿವರು ಗೆಸ್ಟ್ ಅಪಿಯರೆನ್ಸ್ ಥರ ಬರ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯತ್ನಾಳ್ ದನಿಗೂಡಿಸಿ, ಇವರು ಉತ್ತರ ಕೊಡಲು ಇಲ್ಲಿರಲ್ಲ ಎಂದರೆ ಸಚಿವರಾಗಿ ಏಕಿರಬೇಕು. ಸಚಿವರು ಸದನಕ್ಕೆ ಬರುವಂತೆ ನೀವೇ ಏನಾದರೂ ರೂಲಿಂಗ್ ಕೊಡಬೇಕು. ಸಚಿವರು ಇಲ್ಲದಿದ್ದ ಮೇಲೆ ಮತ್ಯಾಕೆ ಸದನ ನಡೆಸ್ತೀರಿ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಿದರು. ಎಚ್.ಕೆ.ಪಾಟೀಲ್ ಸಹ ಸಚಿವರ ಗೈರಿನ ಬಗ್ಗೆ ದಾಖಲೀಕರಣ ಮಾಡಬೇಕೆಂದು ಆಗ್ರಹಿಸಿದರು. ಪ್ರಶ್ನೋತ್ತರ ಕಲಾಪದ ಬಳಿಕ ಬಜೆಟ್ ಮೇಲೆ ಎಚ್.ಡಿ.ಕುಮಾರಸ್ವಾಮಿ ಮಾತನಾಡಲು ಆರಂಭಿಸಿದಾಗ ಅಧಿಕಾರಿಗಳ ಗ್ಯಾಲರಿ ಖಾಲಿ ಹೊಡೆಯುತ್ತಿತ್ತು. ಜೆಡಿಎಸ್ ಶಾಸಕರು ಗರಂ ಆಗಿ, ನಮ್ಮ ನಾಯಕರು ಮಾತನಾಡುವಾಗ ಅಧಿಕಾರಿಗಳು ಇಲ್ಲ. ಹಣಕಾಸು ಇಲಾಖೆ ಅಧಿಕಾರಿಗಳು ಇಲ್ಲಿದ್ದು ನಾಯಕರ ಮಾತನ್ನು ದಾಖಲು ಮಾಡಿಕೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದರು. ಕೊನೆಗೆ ಸಚಿವ ಮಾಧುಸ್ವಾಮಿ ಅಧಿಕಾರಿಗಳು ಹಾಗೂ ಸದನದಲ್ಲಿ ಇರಬೇಕಾದ ಸಚಿವರನ್ನು ತಕ್ಷಣವೇ ಕರೆಸಿಕೊಂಡರು.
ಇದೇನ್ ಬೀಗರ ಮನೇನಾ?: ಬೇಕೆಂದಾಗ ಬರೋದು, ಇಷ್ಟ ಬಂದಾಗ ಹೋಗೋದಕ್ಕೆ ಇದೇನ್ ಬೀಗರ ಮನೇನಾ? ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರೇಗಿದ ಪ್ರಸಂಗ ಬುಧವಾರ ನಡೆಯಿತು. ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರಲ್ಲಿ ಹಲವರ ಗೈರು ಹಾಜರಿಗೆ ಪ್ರತಿಪಕ್ಷಗಳು ಎತ್ತಿದ ಆಕ್ಷೇಪಕ್ಕೆ ಸಭಾಪತಿ ದನಿಗೂಡಿಸಿ, ಕಡ್ಡಾಯ ಎಂಬುದನ್ನು ರದ್ದುಪಡಿಸಿಬಿಡುವೆ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಎಚ್ಚರಿಸಿದರು. ಒಬ್ಬ ಸಚಿವರು ಗೈರು ಹಾಜರಿಗೆ ಕಾರಣ ತಿಳಿಸಿ ಪತ್ರ ಬರೆದು ಪೂರ್ವಾನುಮತಿ ಪಡೆದಿದ್ದಾರೆ. ಕೆಲ ಸಚಿವರು ಕೆಳ ಮನೆಯಲ್ಲಿದ್ದು, ಹಾಜರಿರುವಂತೆ ತಿಳಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಸಮಜಾಯಿಷಿ ನೀಡಿದರು. ಕಾಂಗ್ರೆಸ್ ಯು.ಬಿ.ವೆಂಕಟೇಶ್ ಅವರು ನೀವು (ಕೋಟ ಶ್ರೀನಿವಾಸ ಪೂಜಾರಿ) ಪ್ರತಿಪಕ್ಷ ಸ್ಥಾನದಲ್ಲಿ ಇದ್ದಾಗ ಸಚಿವರ ಗೈರು ಬಗ್ಗೆ ಏನು ಹೇಳುತ್ತಿದ್ದಿರಿ ನೆನಪಿಸಿಕೊಳ್ಳಿರಿ ಎಂದು ಕಾಲೆಳೆದರೆ, ಸಲೀಂ ಅಹಮದ್, ಅನಿಲ್ಕುಮಾರ್ ಇನ್ನೂ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಶೌಚಾಲಯ ಹುಡುಕಿ ಹೊರಟ ಸಚಿವ: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶೌಚಗೃಹ ರಹಿತ ಕುಟುಂಬ ಸಂಖ್ಯೆಯಲ್ಲಿ ವ್ಯತ್ಯಾಸ ಬರುತ್ತಿದೆ ಎಂಬ ಜೆಡಿಎಸ್ನ ಬಂಡೆಪ್ಪ ಖಾಶೆಂಪುರ ಆರೋಪವನ್ನು ಪರಿಶೀಲಿಸಲು ಖುದ್ದು ಸ್ಥಳಕ್ಕೆ ಭೇಟಿ ನೀಡುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ವೇಳೆ ಬಂಡೆಪ್ಪ, ತಮ್ಮ ಕ್ಷೇತ್ರದಲ್ಲಿ ಮಾತ್ರ ಈ ಸಮಸ್ಯೆ ಇಲ್ಲ. ರಾಜ್ಯದೆಲ್ಲೆಡೆ ಇದೆ. ತಮ್ಮ ಕ್ಷೇತ್ರದಲ್ಲಂತೂ ಶೌಚಗೃಹಗಳೇ ಇಲ್ಲ. ಜನರು ಡಬ್ಬಿ ಹಿಡಿದು ಹೋಗುತ್ತಿದ್ದಾರೆ. ಅಧಿಕಾರಿಗಳು ಕೊಡುವ ಮಾಹಿತಿ ಸರಿ ಇಲ್ಲ ಎಂದರು. ಸಚಿವರು ಖುದ್ದು ಕ್ಷೇತ್ರಕ್ಕೆ ಭೇಟಿಕೊಟ್ಟು ಪರಿಶೀಲಿಸಲಾಗುವುದು, ಶೌಚಗೃಹ ನಿರ್ಮಾಣ ಆಗಿರದೇ ಇದ್ದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ದುಬಾರಿ ಬಡ್ಡಿ ಮಾಫಿಯಾ ಕುರಿತಂತೆ ವಿಜಯವಾಣಿಯ ಗಂಗಾವತಿ ಆವೃತಿಯಲ್ಲಿ ಪ್ರಕಟವಾದ ವರದಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಬಜೆಟ್ ಮೇಲಿನ ಚರ್ಚೆ ವೇಳೆ ಪತ್ರಿಕೆಯ ವರದಿಯನ್ನು ಸದನದಲ್ಲಿ ಪ್ರದರ್ಶಿಸಿದ ಎಚ್ಡಿಕೆ, ‘ಸಾಲಗಾರರ ಕಿರುಕುಳಕ್ಕೆ ರೋಸಿ ಹೋದ ಮಹಿಳೆಯರು, ಮರ್ಯಾದೆ ಅಂಜಿ ನೀಡುತ್ತಿಲ್ಲ ದೂರು, ದುಬಾರಿ ಬಡ್ಡಿ ಮಾಫಿಯಾಗೆ ತ್ರಿವಳಿ ತಾಲೂಕಿನ ಜನ ತಲ್ಲಣ’ ಎಂಬ ವರದಿಯಲ್ಲಿನ ಅಂಶವನ್ನು ಓದಿ ಸರ್ಕಾರದ ಗಮನ ಸೆಳೆದರು.
ಸ್ಥಿತಿವಂತ ಶಾಸಕರೇ ವೇತನ ವಾಪಸ್ಸು ಮಾಡಿ!: ಸ್ಥಿತಿವಂತ ಶಾಸಕರೆಲ್ಲ ವೇತನವನ್ನ ವಾಪಸ್ ಮಾಡಿ ಎಂದು ಮೇಲ್ಮನೆಯಲ್ಲಿ ಮನವಿ ಮಾಡಿದ ಬಿಜೆಪಿ ತೇಜಸ್ವಿನಿಗೌಡ ಚರ್ಚೆಗೆ ನಾಂದಿಯಾಡಿದರು. ಪ್ರಧಾನಿಗಳು ಗ್ಯಾಸ್ ಸಂಪರ್ಕವಿರುವ ಸ್ಥಿತಿವಂತರೆಲ್ಲ ಸಬ್ಸಿಡಿ ವಾಪಸ್ ಮಾಡುವ ಮನವಿ ಮಾಡಿದಾಗ ಬಹಳ ಜನರು ಸಬ್ಸಿಡಿ ವಾಪಸ್ ಮಾಡಿದರು. ಹಾಗೆ ಇಲ್ಲಿಯೂ ಆಗಲಿ ಎಂದರು. ಶಿಕ್ಷಕರಿಗೆ ಪಿಂಚಣಿ ಇಲ್ಲ, ಗ್ರಾಪಂ ಸದಸ್ಯರ ಗೌರವಧನ ಹೆಚ್ಚಿಸಲು ಆಗುವುದಿಲ್ಲ. ಆದರೆ ಶಾಸಕರ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲದೆ ಸಂಬಳ ಸಾರಿಗೆ ಹೆಚ್ಚಾಗುತ್ತಿದೆ ಎಂದು ಹೊರಗೆ ಜನ ಮಾತನಾಡುತ್ತಿದ್ದಾರೆ ಎಂದು ಬೋಜೇಗೌಡ ಅವರು ಪ್ರಸ್ತಾಪಿಸಿದ್ದು ಚರ್ಚೆಗೆ ಕಾರಣವಾಯ್ತು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಎಚ್.ವಿಶ್ವನಾಥ್, 1978ರಲ್ಲಿ ಶಾಸಕರಿಗೆ ಗೌರವಧನ 600 ರೂ ಇತ್ತು. ಪ್ರತಿ ದಿನ ಹಾಜರಾಗಿ ಸಹಿ ಹಾಕಿದರೆ 50 ರೂ.ಕೊಡುತ್ತಿದ್ದರು ಎಂದು ನೆನಪಿನ ಬುತ್ತಿ ಬಿಚ್ಚಿದರು.
ನಾನು ಶಾಸಕನಾಗಿದ್ದಾಗ ಒಬ್ಬ ಹುಡುಗ ಕಾರು ತೊಳೆದು 2 ರೂ. ಕೇಳ್ತಿದ್ದ. ಒಮ್ಮೆ ಹೊಡೆದು ಬಿಟ್ಟೆ. ಆಗ, ಆತ ನಾನು ಮಧುಗಿರಿಯಿಂದ 2 ಬಾರಿ ಶಾಸಕರಾಗಿದ್ದವರ ಮಗ. ನನ್ನ ಅಣ್ಣ ಇನ್ನೊಂದು ಕಡೆ ಕಾರು ತೊಳೆಯುತ್ತಾನೆ. ಇದರಿಂದ ಬರುವ ಹಣದಲ್ಲಿ ಬದುಕುತ್ತೇವೆ. ತಂದೆಯವರ ಪ್ರಾಮಾಣಿಕತೆ ನಮಗೆ ಈ ಸ್ಥಿತಿ ತಂದಿದೆ. ಪಿಂಚಣಿ ಬಂದರೆ ಬದುಕಬಹುದು ಎಂದ. ಈ ಘಟನೆಯಿಂದ ನಮ್ಮಂತ ಜನಪ್ರತಿನಿಧಿಗೆ ಮುಂದೆ ಪಿಂಚಣಿಯ ಅಗತ್ಯ ಎಷ್ಟಿದೆ ಎಂಬ ಅರಿವಾಯಿತು. ದೇವರಾಜ ಅರಸು ಈ ಬಗ್ಗೆ ಒಂದು ಬಿಲ್ ಮಾಡಲು ಹೇಳಿದ್ದರಿಂದ ನಾನು, ಟಿ.ಬಿ.ಜಯಚಂದ್ರ, ಕಡಿದಾಳ್ ಮಂಜಪ್ಪ ಬಿಲ್ ರೆಡಿ ಮಾಡಿದೆವು. ಹಾಗಾಗಿ ಪಿಂಚಣಿ ಬಂತು. ಅರಸು ಅವಧಿಯಲ್ಲಿ ಕೆಲ ಶಾಸಕರಿಗೆ 125 ಸೈಟ್ಗಳನ್ನು ಸಾಮೂಹಿಕವಾಗಿ ನೀಡಿದ್ದರು. ಗುಂಡೂರಾವ್ ಸಿಎಂ ಆದಾಗ 1000 ರೂ. ಸಂಬಳ ಮಾಡಿದರು. ಈಗ ರಾಜಕೀಯ ರಣೋತ್ಸಾಹದಲ್ಲಿ ಎಲ್ಲ ಬರ್ತಾರೆ, ಯಾರು ಗೆಲ್ಲುತ್ತೇವೋ ಸೋಲುತ್ತೇವೋ ಗೊತ್ತಿಲ್ಲ. ಎಲ್ಲರಿಗೂ ವೇತನ ಹೆಚ್ಚಳದ ಅಗತ್ಯವಿಲ್ಲವಾದರೂ ಮರ್ಯಾದೆಯಿಂದ ಬದುಕುವ ನಮ್ಮಂತವರಿಗೆ ಅವಶ್ಯಕತೆ ಇದೆ. ನಾವು ಬದುಕಲು ಗೌರವಧನ ಹೆಚ್ಚಳ ಅನಿವಾರ್ಯ ಎಂದರು. ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನಿನ್ನೆ 20ಕ್ಕೂ ಹೆಚ್ಚು ಮಾಜಿ ಶಾಸಕರು ಬಂದು ಸಹಾಯ ಕೇಳಿ ಹೋಗಿದ್ದಾರೆ. ಈ ಬಗ್ಗೆ ಸಿಎಂಗೆ ಪತ್ರ ಬರೆಯುತ್ತಿದ್ದೇನೆ ಎಂದು ಚರ್ಚೆಗೆ ತೆರೆ ಎಳೆದರು.
ಗಂಡುಕರುಗಳಿಗಿಲ್ಲ ಕಿಮ್ಮತ್ತು!: ಹೆಣ್ಣುಕರುಗಳಿಗೆ ಇರುವಷ್ಟು ಕಿಮ್ಮತ್ತು ಗಂಡು ಕರುಗಳಿಗಿಲ್ಲ! ಹೀಗೊಂದು ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಗಿದ್ದು ವಿಧಾನ ಪರಿಷತ್. ಯಾವ ರೈತರಿಗೂ ಗಂಡುಕರುಗಳು ಬೇಕಾಗಿಲ್ಲ. ಅವುಗಳನ್ನು ಸಾಕುವುದು ಹೊರೆಯಾಗುತ್ತಿದೆ ಅವುಗಳನ್ನು ಏನು ಮಾಡುವುದು ಎಂಬುದು ರೈತರಿಗೆ ದೊಡ್ಡ ಸವಾಲಾಗಿದೆ ಎಂದು ಜೆಡಿಎಸ್ನ ಬೋಜೇಗೌಡ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ನ ರವಿ, ಉತ್ತರ ಪ್ರದೇಶದ 3 ಜಿಲ್ಲೆಗಳಲ್ಲಿ ಬಿಡಾಡಿ ಜಾನುವಾರುಗಳದ್ದೆ ಈ ಬಾರಿ ಚುನಾವಣೆ ವಿಷಯವಾಗಿದೆ. ಗೋಹತ್ಯೆ ಕಾಯಿದೆ ಪರಿಣಾಮ ಎದುರಿಸಬೇಕಾಗಿದೆ. ಗೋವುಗಳ ಸಾಕಾಣಿಕೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದರು. ಪ್ರಾಣೇಶ್ ಮಾತನಾಡಿ, ಮಲೆನಾಡು ಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಹಾಗೆಂದ ಮಾತ್ರಕ್ಕೆ ಅವುಗಳನ್ನು ಕೊಲ್ಲಲು ಆಗುತ್ತಾ? ಎಂದು ಕೇಳಿದರು. ಚರ್ಚೆ ಮಧ್ಯೆ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಗಂಡು ಕರುಗಳನ್ನು ತಗೊಳಕ್ಕೂ ಈಗ ಜನ ಬರ್ತಾ ಇಲ್ಲ. ಹುಟ್ಟಿದ ಕೆಲ ದಿನಗಳಿಗೆ ಎಲ್ಲಿಯಾದರೂ ಬೀದಿಗೆ ಬಿಟ್ಟು ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಚರ್ಚೆಗೆ ತೆರೆ ಎಳೆದರು.
ಗದ್ದೆ ಬೈಲು ರಸ್ತೆ ಅಭಿವೃದ್ಧಿ: ಗ್ರಾಮೀಣ ಪ್ರದೇಶದಲ್ಲಿ ಜಮೀನಿನಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಗದ್ದೆ ಬೈಲು ರಸ್ತೆಗಳ ಅಭಿವೃದ್ಧಿ ಸಂಬಂಧ ಮುಖ್ಯಮಂತ್ರಿಗಳ ಜತೆ ರ್ಚಚಿಸಿ ಕ್ರಮ ಕೈಗೊಳ್ಳುವುದಾಗಿ ಸಕ್ಕರೆ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ತಿಳಿಸಿದರು. ಜೆಡಿಎಸ್ನ ಡಿ.ಸಿ.ತಮ್ಮಣ್ಣ ಪ್ರಸ್ತಾವನೆಗೆ ಉತ್ತರಿಸಿದರು. 2017ರಿಂದ ಸಕ್ಕರೆ ಕಾರ್ಖಾನೆಗಳಿಂದ ರಸ್ತೆ ಕರ ವಸೂಲು ಮಾಡುತ್ತಿಲ್ಲ. ಈ ಹಿಂದೆ ಮಾಡಿರುವ 22 ಕೋಟಿ ರೂ. ಕಾಮಗಾರಿ ಪೈಕಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ರಸ್ತೆ ಅಭಿವೃದ್ಧಿ ಮಾಡಲು ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸಮ್ಮತಿಸುತ್ತಿಲ್ಲ. ಸಕ್ಕರೆ ಕಾರ್ಖಾನೆಗಳಿಂದ ರಸ್ತೆ ಕರ ವಸೂಲು ಮಾಡದೇ ಇದ್ದರೆ ಬಜೆಟ್ನಲ್ಲಿ ಈ ರಸ್ತೆ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಖೇಲೋ ಇಂಡಿಯಾ ಹಣ ಪಡೆಯಿರಿ: ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳ ನಿರ್ವಣ, ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಅನುದಾನ ಸಿಗಲಿದೆ. ಶಾಸಕರು ಸೂಕ್ತ ನಿವೇಶನ ಗುರುತುಪಡಿಸಿ ಪ್ರಸ್ತಾವನೆ ಸಲ್ಲಿಸಬಹುದು ಎಂದು ಕ್ರೀಡಾ ಸಚಿವ ನಾರಾಯಣ ಗೌಡ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ದೇವಾನಂದ್ ಚವಾಣ್ ಅವರು ವಿಷಯ ಪ್ರಸ್ತಾಪಿಸಿ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡುವಂತೆ ಆಗ್ರಹಿಸಿದರು. ಈ ವೇಳೆ ದನಿಗೂಡಿಸಿದ ಶಾಸಕ ಕುಮಾರ್ ಬಂಗಾರಪ್ಪ, ಖೇಲೋ ಇಂಡಿಯಾ ಬಳಕೆ ಹೇಗೆಂದು ಪ್ರಶ್ನಿಸಿದರು. ಉತ್ತರ ನೀಡಿದ ಸಚಿವರು, 4.5 ಎಕರೆ ಜಾಗ ನಿಗದಿ ಮಾಡಿ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದಿಂದ 6 ಕೋಟಿ ರೂ. ವರೆಗೆ ಅನುದಾನ ದೊರೆಯಲಿದೆ., 25 ಎಕರೆ ಜಾಗ ಕೊಟ್ಟರೆ 65 ಕೋಟಿ ರೂ. ನಡಿ ಸಮಗ್ರ ವಾಗಿ ಕ್ರೀಡಾಂಗಣ ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದರು.
ಅಂಜನಾದ್ರಿ ಟು ಅಯೋಧ್ಯೆ: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಿಂದ ರಾಮನು ಜನಿಸಿದ ಅಯೋಧ್ಯೆಗೆ ರೈಲು ಮತ್ತು ವಿಮಾನಯಾನ ಸಂಪರ್ಕ ಕಲ್ಪಿಸುವ ವಿಶೇಷ ಪ್ರವಾಸಿ ಪ್ಯಾಕೇಜ್ ರೂಪಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ರ್ಚಚಿಸಿದ್ದು, ಶೀಘ್ರ ಕ್ರಮವಹಿಸಲಾಗುವುದು ಎಂದು ಮುಜರಾಯಿ ಸಚಿವೆ ಭರವಸೆ ನೀಡಿದರು. ವಿಧಾನ ಪರಿಷತ್ನಲ್ಲಿ ಬಿಜೆಪಿಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂಜನಾದ್ರಿ ಬೆಟ್ಟ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನವನ್ನು ಬೊಮ್ಮಾಯಿ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ ಎಂದು ವಿವರಿಸಿದರು.
ರೋಪ್ವೇಗೂ ಕ್ರಮ: ಕಾಂಗ್ರೆಸ್ನ ಅಲ್ಲಂ ವೀರಭದ್ರಪ್ಪ ವಯಸ್ಸಾದವರು, ಅಶಕ್ತರು ಕೂಡ ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಬರಲು ರೋಪ್ವೇ ನಿರ್ವಿುಸಬೇಕು ಎಂದರು. ಮುಜರಾಯಿ ಸಚಿವೆ ಪ್ರತಿಕ್ರಿಯಿಸಿ, ಬೆಟ್ಟದ ಸಮಗ್ರ ಅಭಿವೃದ್ಧಿ ಸರ್ಕಾರ ಬದ್ಧವಾಗಿದೆ ಎಂದರು.
ಸಹಕಾರ ಸಂಘಗಳ ಅಕ್ರಮಕ್ಕೆ ಕಡಿವಾಣ: ಹೆಚ್ಚು ಬಡ್ಡಿ ದರದ ಆಮಿಷವೊಡ್ಡಿ ಗ್ರಾಹಕರಿಂದ ಠೇವಣಿ ಇರಿಸಿಕೊಳ್ಳುವ ಸಹಕಾರ ಸಂಘಗಳು ನಂತರ ವ್ಯಾಪಕ ಅಕ್ರಮಗಳನ್ನು ನಡೆಸುತ್ತಿದ್ದು, ಸಂಬಂಧಿತ ಕಾಯ್ದೆ ಬಲಪಡಿಸಿ ಇಂತಹ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಎಂದು ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ನ ಎಸ್.ರವಿ ಒತ್ತಾಯಿಸಿದರು. ಶೂನ್ಯವೇಳೆಯಲ್ಲಿ ಬುಧವಾರ ಈ ವಿಷಯ ಪ್ರಸ್ತಾಪಿಸಿದ ಅವರು, ಗ್ರಾಹಕರ ಠೇವಣಿ ಹಣವನ್ನು ಸಂಘದ ಸದಸ್ಯರು, ಪ್ರಭಾವಿಗಳು ಮತ್ತು ಬೇಕಾದವರಿಗೆ ಸಾಲ ನೀಡುತ್ತಿವೆ. ಕೊಟ್ಟ ಸಾಲ ತಿರುಗಿ ಬಾರದೆ 500-700 ಸಂಘಗಳು ನಷ್ಟದಲ್ಲಿದ್ದರೆ, 200-300 ಸಂಘಗಳು ದಿವಾಳಿಯಾಗಿವೆ. ಈ ಸಹಕಾರ ಸಂಘಗಳ ಅವ್ಯವಹಾರಗಳಿಗೆ ಅಂಕುಶವಿಲ್ಲ. ಕೋಟ್ಯಂತರ ದುರ್ಬಳಕೆ ಪರಿಣಾಮ ಠೇವಣಿಯಿಟ್ಟ ಗ್ರಾಹಕರ ಪಡಿಪಾಟಲು ಹೇಳತೀರದಾಗಿದೆ. ಅಕ್ರಮ ಎಸಗುತ್ತಿರುವ ಸಂಘಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಂಡು, ಗ್ರಾಹಕರ ಪರದಾಟ ತಪ್ಪಿಸಬೇಕು ಎಂದು ಎಸ್.ರವಿ ಆಗ್ರಹಿಸಿದಾಗ ಸಹಕಾರ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಅನ್ಯ ಇಲಾಖೆಗೆ ಎರವಲು ಸೇವೆ ವಾಪಸ್: ಪಶು ಸಂಗೋಪನಾ ಇಲಾಖೆಗೆ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ಭರ್ತಿಗೆ ವಿಶೇಷ ನೇಮಕ ನಿಯಮಗಳನ್ನು ರಚಿಸಿ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಲ್ಲದೆ, ಅನ್ಯ ಇಲಾಖೆಗಳಿಗೆ ಎರವಲು ಸೇವೆಯನ್ನು ವಾಪಸ್ ಪಡೆಯಲಾಗಿದೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ದೃಢ ನಿಲುವು ವ್ಯಕ್ತಪಡಿಸಿದರು. ಬಿಜೆಪಿಯ ಸುನಿಲ್ ವಲ್ಯಾಪುರ್ ಪ್ರಶ್ನೆಗೆ ಉತ್ತರಿಸಿದ ಅವರು, ಆದೇಶಿಸಿದ ನಂತರವೂ ಎರವಲು ಸೇವೆಯಲ್ಲಿ ಮುಂದುವರಿದಿರುವ ಮೂವರು ಪಶು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದ್ದು, ವಾಪಸ್ ಬರದಿದ್ದರೆ ಸೇವೆಯಿಂದ ಅಮಾನತು ಮಾಡಲಾಗುವುದು. ಈ ವಿಷಯದಲ್ಲಿ ಯಾವುದೇ ರಾಜಿಯಿಲ್ಲವೆಂಬ ದೃಢ ನಿಲುವು ವ್ಯಕ್ತಪಡಿಸಿದರು. ಬೀದರ್ನಲ್ಲಿರುವ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೇರೆಡೆ ಸ್ಥಳಾಂತರಿಸುವ ಹುನ್ನಾರವಿಲ್ಲ. ಯಾವುದೇ ಕಾರಣಕ್ಕೂ ಸ್ಥಳಾಂತರಕ್ಕೆ ಸರ್ಕಾರ ಅವಕಾಶ ನೀಡದು ಎಂದು ಕಂದಾಯ ಸಚಿವ ಆರ್.ಅಶೋಕ್ ಅಭಯ ನೀಡಿದರು. ಕಾಂಗ್ರೆಸ್ನ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಮಧ್ಯೆ ಪ್ರವೇಶಿಸಿ ಆರ್.ಅಶೋಕ್ ಉತ್ತರಿಸಿ, ಪಶು ವಿವಿ ಸ್ಥಳಾಂತರಿಸುವ ಯಾವ ಪ್ರಯತ್ನಗಳಾಗಿಲ್ಲ, ಅಂತಹ ಅನುಮಾನ ಬೇಡವೆಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಎಚ್ಡಿಕೆ, ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಲ್ಲ, ಆಂಧ್ರ ಕಡೆಗೆ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇತ್ತಲ್ಲ. ಯುಕೆಪಿ 3ನೇ ಹಂತದಲ್ಲಿ 130 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ನಮಗೆ ಅವಕಾಶ ಇತ್ತು. 50 ಸಾವಿರ ಕೋಟಿ ರೂ., ಇಟ್ಟಿದ್ದರೂ ಎಷ್ಟು ಖರ್ಚು ಮಾಡಿದ್ದಾರೆ. ನಾವೇ 26 ಅಣೆಕಟ್ಟು ಕಟ್ಟಿದ್ದೀವಿ ಅಂತೀರಿ, ಎಲ್ಲಿ ಕಟ್ಟೀದರಪ್ಪ..? ಯಾರೋ ಮಾಡಿದ್ದನ್ನು ನೀವು ಸರ್ಟಿಫಿಕೇಟ್ ತಗೊತೀರಾ..? ಆಲಮಟ್ಟಿ ಜಲಾಶಯ ಪೂರ್ಣ ಮಾಡೋದಕ್ಕೆ ಜನತಾದಳ ಸರ್ಕಾರ ಬರಬೇಕಾಯಿತು, ನೀವು ಎಲ್ಲಿ ಇದ್ರಿ . ನಿದ್ದೆ ಮಾಡ್ಕೊಂಡು ಇದ್ರಿ ಎಂದು ಕುಮಾರಸ್ವಾಮಿ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡಿ ವಾಗ್ಧಾಳಿ ನಡೆಸಿದರು. ನಾವು ಏನೂ ಖರ್ಚು ಮಾಡಿಲ್ಲ ಅಂತ ಹೇಳೋದು ಸರಿಯಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಸಮಜಾಯಿಷಿ ನೀಡಲು ಮುಂದಾದಾಗ ಜೆಡಿಎಸ್, ಕಾಂಗ್ರೆಸ್ ಮಧ್ಯೆ ಮಾತಿನ ಸಮರ ಏರ್ಪಟ್ಟಿತ್ತು. ಮಧ್ಯಪ್ರವೇಶಿಸಿದ ರಮೇಶ್ ಕುಮಾರ್ ಅವರು ಏನಾದರೂ ಟೀಕೆ ಮಾಡಿಕೊಳ್ಳಲಿ, ಬಿಟ್ಟು ಬಿಡಿ. ಇದು ಪ್ರಜಾಪ್ರಭುತ್ವ, ನಾವು ಆವೇಶಕ್ಕೆ ಒಳಗಾಗೋದು ಬೇಡ ಎಂದು ತಮ್ಮ ಪಕ್ಷದ ಸದಸ್ಯರಿಗೆ ಸುಮ್ಮನಿರುವಂತೆ ಸಲಹೆಕೊಟ್ಟರು. ಈ ವೇಳೆ ಸಚಿವ ಅಶೋಕ್ ಎದ್ದುನಿಂತು, ಕಾಂಗ್ರೆಸ್ನವರು ಯಾಕೆ ಪದೇ ಪದೇ ಎದ್ದು ಮಾತಾಡ್ತಿದಾರೆ? ಕುಮಾರಸ್ವಾಮಿ ಅವರಿಗೆ ಸರ್ಕಾರ ಉತ್ತರ ಕೊಡಬೇಕು. ನೀವ್ಯಾಕೆ ಸ್ಪಷ್ಟನೆ ಕೊಡುತ್ತೀರಾ ಎಂದು ಕೆಣಕಿದರು. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಲ್ಲ. ಕಾಂಗ್ರೆಸ್ ನಡಿಗೆ ಇಟಲಿ ಕಡೆಗೆ ಅಂತ ಯತ್ನಾಳ್ ಕಾಲೆಳೆದರು.