ಬೆಂಗಳೂರು: ವಿಧಾನ ಪರಿಷತ್ ನ ಕಲಹ ತನಿಖೆಗೆ ಸದನ ಸಮಿತಿ ರಚನೆಯ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಸಭಾಪತಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಶನಿವಾರ ಮಾತನಾಡಿದ ಅವರು, ನಿಯಮಾವಳಿ ಪ್ರಕಾರ ಸದನದಲ್ಲಿ ಚರ್ಚಿಸಿದ ನಂತರವೇ ಸಮಿತಿ ರಚಿಸಬೇಕು. ಆದರೆ, ಸಭಾಪತಿ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದಾರೆ ಎಂದು ಟೀಕಿಸಿದರು.
ಈ ಹಿನ್ನೆಲೆಯಲ್ಲಿ ಸದನ ಸಮಿತಿ ಸದಸ್ಯತ್ವಕ್ಕೆ ಎಚ್.ವಿಶ್ವನಾಥ್ ಹಾಗೂ ಎಸ್.ವಿ.ಸಂಕನೂರು ರಾಜೀನಾಮೆ ನೀಡಿದ ಪತ್ರವನ್ನು ಸಭಾಪತಿ ಕಚೇರಿಗೆ ರವಾನಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.
ಸದನ ಸಮಿತಿಗೆ ಅಧ್ಯಕ್ಷರಾಗಿ ನೇಮಕವಾಗಿರುವ ಮರಿತಿಬ್ಬೇಗೌಡ ಯಾವ ಪಕ್ಷದಲ್ಲಿ ಇದ್ದಾರೋ ತಿಳಿಯದು. ಗಲಾಟೆಗೆ ಪ್ರಚೋದಿಸಿದ ಬಿ.ಕೆ.ಹರಿಪ್ರಸಾದ್ ಅವರನ್ನು ಈ ಸಮಿತಿ ಸದಸ್ಯರನ್ನಾಗಿ ನೇಮಿಸಿರುವುದು ವಿಪರ್ಯಾಸದ ಸಂಗತಿ ಎಂದು ರವಿಕುಮಾರ್ ವ್ಯಂಗ್ಯವಾಡಿದರು.