

ಬಾಳೆಹೊನ್ನೂರು: ಜೀವನಾಧಾರಕ್ಕೆ ನೀರು, ಅನ್ನ, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಉತ್ತಮ ಚಿಂತನೆಗಳು ಬದುಕಿನ ಶ್ರೇಯಸ್ಸಿಗೆ ಮೂಲ. ಸತ್ಯ ಮತ್ತು ಸಂಸ್ಕೃತಿ ಉಳಿದು ಬೆಳೆದುಬರಬೇಕಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ರಂಭಾಪುರಿ ಪೀಠದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರಾವಣ ಮಾಸದ ಪುರಾಣ ಪ್ರವಚನ ಮಂಗಲ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬದುಕು ಸುಖ-ದುಃಖ, ನೋವು-ನಲಿವು, ಜಯ-ಅಪಜಯ ಮೊದಲಾದ ದ್ವಂದ್ವಗಳಿಂದ ಕೂಡಿದೆ. ಈ ಸಂಗತಿ ಯಾರಿಗೆ ಗೊತ್ತಿದೆಯೋ ಅವರು ಜೀವನದಲ್ಲಿ ಏನೆಲ್ಲ ಕಷ್ಟ ಬಂದರೂ ಅವುಗಳಿಗೆ ಎದೆಗುಂದಬಾರದು. ಸುಖದ ಬದುಕಿಗೆ ಪ್ರಯತ್ನ ಮತ್ತು ಸಾಧನೆ ಬೇಕು. ಬದುಕು ವಿಕಾಸಗೊಳ್ಳಲು ಅಧ್ಯಾತ್ಮದ ಅರಿವು ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.
ಶ್ರಾವಣ ಮಾಸದಲ್ಲಿ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿ ಮಂಗಲಗೊಳಿಸುತ್ತಿರುವ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸುಂದರವಾದ ಉಡುಪು ನಮ್ಮ ವ್ಯಕ್ತಿತ್ವವನ್ನು ಮೆರೆಸಬಹುದು. ಸುಂದರವಾದ ಗುಣ ನಮ್ಮ ಬದುಕನ್ನೇ ಬದಲಾಯಿಸುತ್ತದೆ. ಸುಖ-ದುಃಖ ಶಾಶ್ವತವಲ್ಲ. ಅವೆರಡನ್ನೂ ಸಮಾನವಾಗಿ ಸ್ವೀಕರಿಸಿ ಬಾಳಿದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದರು.