ಅಂಕಲಗಿ: ವಿಶ್ವ ಯೋಗ ದಿನದ ಅಂಗವಾಗಿ ಅಕ್ಕತಂಗೇರಹಾಳ ಬಾವಿಯಲ್ಲಿ ಮದವಾಲದ ಯೋಗಪಟು ಅಶೋಕ ಶಿಗ್ಗಾವಿ ಭಾನುವಾರ ಸತತ 6 ಗಂಟೆಗಳ ಕಾಲ ಯೋಗದ ವಿವಿಧ ಆಯಾಮ ಪ್ರದರ್ಶಿಸಿ ಗಮನಸೆಳೆದರು. ಬಾಲ್ಯದಿಂದಲೇ ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು, ವಿವಿಧ ಸಂದರ್ಭಗಳಲ್ಲಿ ನೀರಿನಲ್ಲಿ ಮುಳುಗುತ್ತಿದ್ದ 6 ಜನರ ಜೀವ ರಕ್ಷಿಸಿದ ಸಾಹಸಿಯೂ ಆಗಿದ್ದಾರೆ.
ಚಿಕ್ಕಂದಿನಿಂದಲೇ ತಂದೆ ಮಲ್ಲಪ್ಪ ಅವರೊಂದಿಗೆ ನಿತ್ಯವೂ ಸ್ನಾನಕ್ಕಾಗಿ ಕೆರೆ, ಬಾವಿಗಳಿಗೆ ತೆರಳುತ್ತಿದ್ದ ಅವರು, ಜಲ ಯೋಗ ಮಾಡಲು ಆರಂಭಿಸಿದರು. ದುರ್ಘಟನೆಯೊಂದರಲ್ಲಿ ಕೈ-ಕಾಲುಗಳಿಗೆ ಬಲವಾದ ಏಟು ಬಿದ್ದು ಅಂಗವಿಕಲರಾಗಿದ್ದರೂ ಯೋಗ ಸಾಧನೆ ಮುಂದುವರಿಸಿದ್ದಾರೆ. ಯಾವೊಂದು ಸಂಘಟನೆಯೂ ತಮ್ಮನ್ನು ಗುರುತಿಸಿಲ್ಲ ಎಂಬ ಕೊರಗು ಅಶೋಕ ಶಿಗ್ಗಾವಿ ಅವರನ್ನು ಕಾಡುತ್ತಿದೆ.