ಸಣ್ಣ ಜಾತಿಗಳ ಏಳಿಗೆಗೆ ಸರ್ಕಾರ ಬದ್ಧ

Yadava
Published on

ಚಿತ್ರದುರ್ಗ: ಮೀಸಲು ವಿಚಾರದಲ್ಲಿ ಸಣ್ಣ ಸಮುದಾಯಗಳಿಗೆ ರಾಜಕೀಯ ಸೇರಿ ಇನ್ನಿತರ ನ್ಯಾಯ ದೊರೆಯಲು ಮಾಜಿ ಸಿಎಂ ದೇವರಾಜ ಅರಸು ಕಾರಣ. ಅವರ ಹಾದಿಯಲ್ಲಿ ಈಗಿನ ಸಿಎಂ ಸಿದ್ದರಾಮಯ್ಯ ಕೂಡ ಸಾಗುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ನಗರದ ಹೊರವಲಯದ ಯಾದವ ಮಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಲಕ್ಷಿತ ಹಾಗೂ ಸಣ್ಣ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದರು.

ನಾನೂ ಸೇರಿ ಸಣ್ಣ ಸಮುದಾಯಗಳ ಹಲವರು, ಶಾಸಕರು, ಸಚಿವರಾಗಲು ಮೀಸಲಾತಿಯೇ ಮುಖ್ಯ ಕಾರಣ ಎಂದ ಅವರು, ಯಾರು ಧರ್ಮವನ್ನು ಕಾಯುತ್ತಾರೋ ಅಂತಹವರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದರು.

ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಸಮುದಾಯಗಳ ನಡುವೆ ಪರಸ್ಪರ ಸ್ನೇಹ-ಸಹಬಾಳ್ವೆ ಇರಬೇಕು. ಆಗ ಮಾತ್ರ ಬೆಳವಣಿಗೆ ಸಾಧ್ಯ. ಸಂಘಟನೆ ಇಂದಿನ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ದೇಶದಲ್ಲಿ ಯಾದವರಿಗೆ ಇರುವ ಏಕೈಕ ಪೀಠವೆಂದರೆ ಅದು ಚಿತ್ರದುರ್ಗದ ಗೊಲ್ಲಗಿರಿ. ಯಾವುದೇ ಸಮುದಾಯಗಳು ಸರಿದಾರಿಯಲ್ಲಿ ಸಾಗಲು ಸ್ವಾಮೀಜಿಗಳ ಮಾರ್ಗದರ್ಶನ ಅಗತ್ಯವಿದೆ ಎಂದರು.

ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಮೇದಾರ ಕೇತೇಶ್ವರ ಸ್ವಾಮೀಜಿ, ಶ್ರೀ ಅಪ್ಪಣ್ಣ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮುರುಘಾಮಠದ ಕೊಡುಗೆ ಮರೆಯದಿರಿ: ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ರಾಜ್ಯದಲ್ಲಿ ಗೊಲ್ಲ ಸಮಾಜ ಬಲಿಷ್ಠ, ಸ್ವಾಭಿಮಾನಿ ಸಮುದಾಯ ವಾಗಿ ಬೆಳೆಯುತ್ತಿದೆ. ಮುರುಘಾಮಠಕ್ಕೂ ಈ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀಮಠದ ಜಾಗವನ್ನು ಗೊಲ್ಲಗಿರಿ ಕ್ಷೇತ್ರಕ್ಕೆ ಕೊಡಿಸಲು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದ್ದರಿಂದ ಯಾದವರು ಮುರುಘಾಮಠದ ಮೇಲೆ ಸದಾ ಗೌರವ ಭಾವನೆ ಇಟ್ಟುಕೊಳ್ಳಬೇಕು. ಮಠದ ಕೊಡುಗೆ ಸ್ಮರಿಸಬೇಕು ಎಂದು ಹೇಳಿದರು.

ಪಕ್ಷಾತೀತವಾಗಿ ಸಂಘಟಿತರಾಗೋಣ: ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಶತಮಾನೋತ್ಸವ ಆಚರಿಸುವ ಹಂತಕ್ಕೆ ತಲುಪಿರುವ ಏಕೈಕ ಸಂಘ, ಸಮಾಜ ಯಾವುದಾದರೂ ಇದ್ದರೆ, ಅದು ಅಖಿಲ ಭಾರತ ಯಾದವ ಸಂಘ. ಹೀಗಾಗಿ ದೊಡ್ಡಮಟ್ಟದ ಕಾರ್ಯಕ್ರಮಕ್ಕೆ ಅಣಿಯಾಗೋಣ. ಪಕ್ಷಾತೀತವಾಗಿ ಸಂಘಟಿತರಾಗೋಣ. ಸರ್ಕಾರಿ ಸೌಲಭ್ಯ ಪಡೆಯಲು ಕಾರ್ಯಪ್ರವೃತ್ತರಾಗೋಣ ಎಂದು ಹೇಳಿದರು.

ಬಿಜೆಪಿ ಶಾಸಕ ಧೀರಜ್ ಮುನಿರಾಜು, ಯಾದವ ಸಂಘದ ಉಪಾಧ್ಯಕ್ಷರಾದ ಜಿ.ಸಿದ್ದಪ್ಪ, ವಿಠಲ್ ಯಾದವ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಎಂಎಲ್ಸಿ ಜಯಮ್ಮ ಬಾಲರಾಜ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮುಖಂಡರಾದ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಗೀತಾ ನಂದಿನಿಗೌಡ, ಆರ್.ನರಸಿಂಹರಾಜು, ಓ.ಶಂಕರ್, ಕೆ.ಸಿ.ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net