ಸಚಿವರ ಕಚೇರಿ ಬಳಿ ದನ ಕಟ್ಟುತ್ತೇವೆ

CTD 7 STRIKE-RITA--04
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಕೇಂದ್ರದ ಘೋಷಿತ ಅನುದಾನ 5,300 ಕೋಟಿ ರೂ. ಬಿಡುಗಡೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ರೈತರು ಒತ್ತಾಯಿಸಿದರು.
ಜಿಪಂ ಆವರಣದ ಕೇಂದ್ರ ಸಚಿವರ ಕಚೇರಿ ಬಳಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಬುಧವಾರ ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಜನ ಜಾಗೃತಿ ಸಭೆ ನಡೆಸಿದರು.
ರೈತ ಸಂಘದ ಹೊಳಲ್ಕೆರೆ ತಾಲೂಕು ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಅನುದಾನ ಘೋಷಿಸಿ ಒಂದು ವರ್ಷ ಕಳೆದರೂ ಹಣ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರಪೀಡಿತ ಚಿತ್ರದುರ್ಗ ಜಿಲ್ಲೆಯ ರೈತರು ಮಳೆಯನ್ನಾಧರಿಸಿ ಕೃಷಿ ಮಾಡುತ್ತಿದ್ದಾರೆ. ಬರಗಾಲದಿಂದ ಬೆಳೆ ನಷ್ಟವಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹತ್ತಾರು ವರ್ಷಗಳಿಂದ ನೀರಾವರಿಗೆ ಹೋರಾಟ ನಡೆದಿದ್ದರೂ ಎಲ್ಲ ಸರ್ಕಾರಗಳು ಆಶ್ವಾಸನೆಯೊಂದಿಗೆ ಜಿಲ್ಲೆ ಜನರನ್ನು ವಂಚಿಸಿಕೊಂಡು ಬಂದಿವೆ ಎಂದು ದೂರಿದರು.
ಇನ್ನು 2-3 ದಿನಗಳಲ್ಲಿ ಅನುದಾನ ಬಿಡುಗಡೆ ಆಗದಿದ್ದರೆ ಹಾಗೂ ಯೋಜನೆ ಕಾಮಗಾರಿ ಚುರುಕಾಗದಿದ್ದರೆ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಚೇರಿ ಬಳಿ ಜಾನುವಾರುಗಳನ್ನು ಕಟ್ಟಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಮುಖಂಡರಾದ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ರಾಮರೆಡ್ಡಿ, ಸತೀಶ್, ಟಿ.ಎಮ್ಮಿಗನೂರು ಜಯಣ್ಣ, ಅನ್ನಪೂರ್ಣಾ, ತುಳಜಮ್ಮ, ಚಂದ್ರಮೌಳಿ, ನಿರಂಜನಮೂರ್ತಿ ಮತ್ತಿತರ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net