ಸಚಿವ ಸಂಪುಟದ ಭವಿಷ್ಯ ಇಂದು ನಿಚ್ಚಳ, 13 ಇಲ್ಲವೇ 14ಕ್ಕೆ ಪ್ರಮಾಣ ವಚನ ಖಚಿತ

Published on

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ನೋಡೋಣ. ಏನೆಂಬುದು ಇವತ್ತು ಗೊತ್ತಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 'ಅಡ್ಡಗೋಡೆ ಮೇಲೆ ದೀಪ'ವಿಟ್ಟಂತೆ ಹೇಳುವ ಮೂಲಕ ಸಚಿವರು ಹಾಗೂ ಆಕಾಂಕ್ಷೆಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದ್ದಾರೆ.
ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ‌ 54ನೇ ಪುಣ್ಯತಿಥಿ ನಿಮಿತ್ತ ವಿಧಾನ ಸೌಧದ ಬಳಿಯಿರುವ ಅವರ ಪ್ರತಿಮೆ ಹತ್ತಿರ ಭಾವಚಿತ್ರಕ್ಕೆ ಸೋಮವಾರ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಖಾಲಿಯಿರುವ 7 ಸ್ಥಾನಗಳನ್ನು ತುಂಬುವುದು ಖಚಿತ. ಬುಧವಾರ ಇಲ್ಲವೇ ಗುರುವಾರ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಆಹ್ವಾನಿಸಿದ್ದು, ಅವರ ಅನುಕೂಲತೆ ನೋಡಿಕೊಂಡು ದಿನಾಂಕ ಹಾಗೂ ಸಮಯ‌ ನಿಗದಿ ಮಾಡಲಾಗುವುದು ಎಂದು ಸಿಎಂ ಬಿಎಸ್ ವೈ ತಿಳಿಸಿದರು.
ಲಾಲ್ ಬಹಾದೂರ್ ಶಾಸ್ತ್ರಿ ಸ್ಮರಣೆ
ಇದಕ್ಕೂ ಮುನ್ನ ಲಾಲ್ ಬಹಾದೂರ್ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ, ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ನೆಹರೂ ಸಂಪುಟದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ, ಪ್ರಧಾನಿಯೂ ಆದ ಅಸಾಧಾರಣ ವ್ಯಕ್ತಿ. ಶಾಸ್ತ್ರೀಜಿ ಅವರ ಜೈಜವಾನ್ ಜೈಕಿಸಾನ್ ಘೋಷಣೆ ಜತೆಗೆ ವಾಜಪೇಯಿ ಅವರ ಜೈವಿಜ್ಞಾನ್ ಮತ್ತು ಪ್ರಧಾನಿ ಮೋದಿ ಅವರ ಜೈಅನುಸಂಧಾನ್ ದೇಶದ ಅಭಿವೃದ್ಧಿಯ ಆಧಾರ ಸ್ತಂಭಗಳಾಗಿವೆ ಎಂದು ಬಿಎಸ್ ವೈ ಕೊಂಡಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net