

ಚಿತ್ರದುರ್ಗ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ, ಮುಡಾ ನಿವೇಶನ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ನಿವೇಶನ ವಿಚಾರದಲ್ಲಿ ಶಾಸಕ ಜಿ.ಟಿ. ದೇವೇಗೌಡ ಮೇಲಿನ ಆರೋಪಕ್ಕೆ ಪ್ರತಿಕ್ರಿ ಯಿಸಿ, ಸಾವಿರಾರು ನಿವೇಶನಗಳ ಹಂಚಿಕೆ ಕುರಿತು ತನಿಖೆಯಾಗಬೇಕಿದೆ ಎಂದರು.
ಜಗ್ಗಲ್ಲ, ಬಗ್ಗಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ರಾತ್ರೋರಾತ್ರಿ ನಿವೇಶನಗಳನ್ನು ಯಾಕೆ ಹಿಂತಿರುಗಿಸಿದರು ಎಂದು ಪ್ರಶ್ನಿಸಿದ ಅವರು, ಅವರಿಗೂ ಭ್ರಷ್ಟಾಚಾರಕ್ಕೂ ನಂಟಿದೆ. ಹಗರಣದ ತನಿಖೆ ಸಿಬಿಐಗೆ ವಹಿಸಿದರೆ ಎಲ್ಲರ ಬಂಡವಾಳ ಹೊರಬೀಳಲಿದೆ ಎಂದರು.
ಇಪ್ಪತ್ತೈದು ವರ್ಷಗಳಿಂದ ಕೈಗೆ ಸಿಗದಿದ್ದ ನಕ್ಸಲರು ಈಗ ಹೇಗೆ ಸಿಕ್ಕರು. ವಿಕ್ರಂಗೌಡ ಎನ್‌ಕೌಂಟರ್ ನಂತರದಲ್ಲಿ ಭಯ ಬಂತಾ? ಇ ದು ಸರ್ಕಾರದ ಪಿತೂರಿ, ನಕ್ಸಲರ ಶರಣಾಗತಿ ಅಲ್ಲ, ಸರ್ಕಾರವೇ ಅವರಿಗೆ ಶರಣಾಗಿದೆ. ಶಸ್ತ್ರಾಸ್ತ್ರಗಳು ಎಲ್ಲಿ? ಇನ್ನು ನಕ್ಸಲರಿದ್ದಾರಾ? ಇವರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದವರು ಯಾರೆಂದು ಪ್ರಶ್ನಿಸಿದರು. ಕೋರ್ಟ್ ಅಥವಾ ಪೊಲೀಸರ ಮುಂದೆ ಶರಣಾಗಬೇಕಿತ್ತು, ಸಿಎಂ ಮುಂದೆ ಆಗಿದ್ದು ಸರಿಯಲ್ಲ ಎಂದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ವಿಚಾರ ಗಂಭೀರವಾಗಿದೆ. ಊಟಕ್ಕೂ ಸೇರುವ ಸ್ವಾತಂತ್ರೃವೂ ಇಲ್ಲವಾ ಗಿದೆ. ರಾಜ್ಯದಲ್ಲಿ ದಲಿತ ವಿರೋಧಿ ಸರ್ಕಾರವಿದೆ. ಕಾಂಗ್ರೆಸ್‌ನಲ್ಲಿ ದಲಿತ ಮಾಫಿಯಾ ಹಾಗೂ ದಲಿತ ವಿರೋಧಿ ಮಾಫಿಯಾವಿದೆ. ಕಾಂಗ್ರೆ ಸ್‌ನಲ್ಲಿರುವ ಕೆಲ ದಲಿತ ಕುಟುಂಬಗಳು ಮತ್ತೊಬ್ಬ ದಲಿತರನ್ನು ಬೆಳೆಯಲು ಬಿಡುತ್ತಿಲ್ಲ ಎಂದರು.
ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಐವರ ಬಂಧನವಾಗಿದೆ. ಉಳಿದವರು ಎಲ್ಲಿ? ಪಿಎಸ್‌ಐ ಪರಶುರಾಮ್ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ, ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಂತೆ ಸಚಿನ್ ಪ್ರಕರಣವೂ ಆಗಬಾರದು. ಇದನ್ನೂ ಕೂಡ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.