

ಹುಣಸೂರು: ಕಾಲಕಾಲಕ್ಕೆ ಬೆಳೆಗಳನ್ನು ಬದಲಿಸುವ ಮೂಲಕ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಹೇಳಿದರು.
ತಾಲೂಕಿನ ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಸಿಟಿಆರ್‌ಐ ಮತ್ತು ತಂಬಾಕು ಮಂಡಳಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ತಂಬಾಕಿಗೆ ಪರ್ಯಾಯ ಬೆಳೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಒಂದೇ ಭೂಮಿಯಲ್ಲಿ ಹಲವು ವರ್ಷಗಳ ಕಾಲ ಒಂದೇ ಬೆಳೆ ಬೆಳೆಯುತ್ತಿದ್ದಲ್ಲಿ ಭೂಮಿಯ ಫಲವತ್ತತೆ ಕಳೆದುಕೊಂಡು ರೋಗರುಜಿನಗಳ ತಾಣವಾಗಿ ಮಾರ್ಪಡುತ್ತದೆ. ಬದಲಾಗಿ ಆಗಾಗ ಬೆಳೆಗಳನ್ನು ಬದಲಾಯಿಸುವುದು ಅಗತ್ಯ. ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ಖಾರೀಫ್ ಸಮಯದಲ್ಲಿ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗಿನ ಕಾಲ ತಂಬಾಕನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತದೆ. ಅತಿಯಾದ ಮಳೆ ಅಥವಾ ಮಳೆ ಕೊರತೆಯಾದಲ್ಲಿ ರೈತರಿಗೆ ತಂಬಾಕು ಮಂಡಳಿ ನಿಗದಿಪಡಿಸಿದ ಪ್ರಮಾಣದಲ್ಲಿ ತಂಬಾಕು ಬೆಳೆಯುವಲ್ಲಿ ವಿಫಲರಾಗುತ್ತಾರೆ. ಇದೇ ಸಂದರ್ಭದಲ್ಲಿ ರೈತರು ಪರ್ಯಾಯ ಬೆಳೆಗಳಾದ ಮುಸುಕಿನ ಜೋಳ, ಗೋವಿನ ಜೋಳದಂಥ ಬಹುಬೇಡಿಕೆಯ ಬೆಳೆಗಳನ್ನು ಬೆಳಯುವುದು ಸೂಕ್ತ. ಚಳಿಗಾಲದಲ್ಲಿ ಸೆಣಬು ಬೆಳೆಯಬಹುದಾಗಿದೆ. ಇದಕ್ಕಾಗಿ ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂಥ ಹಲವಾರು ಯೋಜನೆಗಳು ಇವೆ ಎಂದರು.
ತಂಬಾಕು ಮಂಡಳಿ ಮೈಸೂರು ವಲಯದ ಪ್ರಾದೇಶಿಕ ಅಧಿಕಾರಿ ಶಂಭುಲಿಂಗೇಗೌಡ ಮಾತನಾಡಿ, ರೈತರು ಕೃಷಿಯ ಕುರಿತಾಗಿನ ಪರಿಕಲ್ಪನೆಯು ಬದಲಾಗಿರುವುದನ್ನು ಗಮನಿಸಿ ಅದಕ್ಕೆ ತಕ್ಕಂತೆ ಕೃಷಿ ಕಾರ್ಯ ಕೈಗೊಳ್ಳುವುದು ಸೂಕ್ತ ಎಂದು ಹೇಳಿದರು.
ವಿವಿಧ ಯೋಜನೆಗಳ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ.ವೆಂಕಟೇಶ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಪಶುವೈದ್ಯಾಧಿಕಾರಿ ಡಾ.ಭರತ್, ಹರಾಜು ಅಧೀಕ್ಷಕರಾದ ಸಿದ್ದರಾಮ ಡಾಂಗೆ, ಧನರಾಜ್ ಹಾಗೂ ಪ್ರಗತಿಪರ ರೈತರು ಹಾಜರಿದ್ದರು.