ಸಂಸ್ಕೃತಿಯ ಮಹೋನ್ನತಿಗೆ ಶ್ರಮಿಸಿ

07bhr 2 hariharpura swamiji
ಹರಿಹರಪುರ ಶ್ರೀ
Published on

ಬಾಳೆಹೊನ್ನೂರು: ಭಾರತೀಯ ಸಂಸ್ಕೃತಿ ಮಹೋನ್ನತಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಭಾರತೀಯ ಸಂಸ್ಕೃತಿ ತಾಯಿಯ ಸ್ಥಾನದಲ್ಲಿದೆ. ಇಂತಹ ಸಂಸ್ಕೃತಿ ವಿಕಾಸಗೊಳ್ಳಲು ಸಾವಿರಾರು ವರ್ಷಗಳು ಬೇಕಿವೆ ಎಂದು ಹರಿಹರಪುರ ಮಠದ ಜಗದ್ಗುರು ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಭಾರತೀಯ ಸಂತ ಮಹಾ ಪರಿಷದ್ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಆಶೀರ್ವಚನ ನೀಡಿ, ಭರತ ಭೂಮಿಯಲ್ಲಿ ಜನಿಸಿದ ಭಾರತೀಯ ಸಂಸ್ಕೃತಿ ವಿಕಾಸವಾಗಿದೆ. ಒಂದು ಭೌಗೋಳಿಕ ಪ್ರದೇಶದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ, ಐತಿಹಾಸಿಕ, ವೈಜ್ಞಾನಿಕ ಪರಂಪರೆ ಧ್ರುವೀಕರಣವಾದಾಗ ಸಂಸ್ಕೃತಿ ವಿಕಾಸವಾಗಲಿದೆ. ಭಾರತೀಯ ಸಂಸ್ಕೃತಿ ಹೃದಯ ವೈಶಾಲ್ಯ ಹೊಂದಿದೆ. ಜಗತ್ತಿನ ಶಾಂತಿ, ಸಾಮರಸ್ಯ, ವಿಶ್ವ ಭ್ರಾತೃತ್ವಕ್ಕೆ ಮೂಲ ತಳಹದಿ ಭಾರತೀಯ ಸಂಸ್ಕೃತಿಯಾಗಿದ್ದು, ವಿಚಾರಕ್ಕೆ ಮುಕ್ತ ಅವಕಾಶ ನೀಡಿದೆ. ಸಂಸ್ಕೃತಿ ರಕ್ಷಣೆ ಮಾಡುವ ಪ್ರತಿಯೊಬ್ಬರಿಗೂ ವೈಯಕ್ತಿಕ, ಸಾಮಾಜಿಕ ಜವಾಬ್ದಾರಿ ಇದೆ ಎಂದು ಹೇಳಿದರು.

ಸಂಸ್ಕೃತಿ ಸಂರಕ್ಷಣೆ ಉದ್ದೇಶದಿಂದ ಭಾರತೀಯ ಸಂಸ್ಕೃತಿಗೆ ಸೇರಿದ ಸಮಾನಮನಸ್ಕ ಪೂಜ್ಯ ಸಂತರೆಲ್ಲರೂ ಸೇರಿ ಲೋಕಕಲ್ಯಾಣಕ್ಕಾಗಿ ಭಾರತೀಯ ಸಂತ ಮಹಾ ಪರಿಷದನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಪರಿಷದ್ ಮೂಲಕ ಸಾಮಾನ್ಯ ಸಂಸ್ಕಾರ ಕೇಂದ್ರಗಳನ್ನು ಆರಂಭಿಸಿ ಭಾರತೀಯ ಸಂಸ್ಕೃತಿಗೆ ಸೇರಿದ ಎಲ್ಲ ಮಕ್ಕಳೂ ಭೇದಭಾವವಿಲ್ಲದೆ ಪೂರ್ಣ ಮನಸ್ಸಿನಿಂದ ಮುಕ್ತವಾಗಿ ಸಮಭಾವದಿಂದ ಬೆರೆತು ಭಾರತೀಯ ಸಂಸ್ಕಾರ ಶಿಕ್ಷಣ ಪಡೆಯುವಂತಹ ವ್ಯವಸ್ಥೆಯಾಗಲಿದೆ ಎಂದರು.

ಹರಿಹರಪುರ ಶ್ರೀಗಳ ಆಪ್ತ ಸಹಾಯಕ ರಘುನಾಥ ಶಾಸಿ, ಪ್ರಬೋಧಿನಿ ಗುರುಕುಲದ ಉಮೇಶ್, ಪ್ರಮುಖರಾದ ಬಿ.ಕೆ.ಮಧುಸೂದನ್, ಭಾಸ್ಕರ್ ವೆನಿಲ್ಲಾ, ಆರ್.ಡಿ.ಮಹೇಂದ್ರ, ಎಸ್.ಎನ್.ರಾಮಸ್ವಾಮಿ, ಮಹೇಶ್ಚಂದ್ರ, ಟಿ.ಎಂ.ಉಮೇಶ್ ಕಲ್ಮಕ್ಕಿ, ಎಂ.ಎಸ್.ಚನ್ನಕೇಶವ್, ಕೆ.ಎನ್.ಮರಿಗೌಡ, ಕೆ.ಆರ್.ದೀಪಕ್, ಟಿ.ಎಂ.ನಾಗೇಶ್, ಪ್ರೇಮಲತಾ, ಸುಧಾ ಎಸ್.ಪೈ, ಹಿರಿಯಣ್ಣ, ಚಿ.ಸ.ಪ್ರಭುಲಿಂಗ ಶಾಸಿ, ಎನ್.ಎ.ಸಂಜೀವ, ಜಿ.ಎಂ.ನಟರಾಜ್, ಬಿ.ಜಗದೀಶ್ಚಂದ್ರ, ಪ್ರಭಾಕರ್ ಪ್ರಣಸ್ವಿ, ಮಹೇಶ್ ಆಚಾರ್ಯ, ಕೆ.ಟಿ.ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net