

ಬಾಳೆಹೊನ್ನೂರು: ಪಟ್ಟಣದ ರೇಣುಕನಗರದ ಸಂಸ್ಕೃತಿಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು. ಮುಖ್ಯಶಿಕ್ಷಕಿ ರಜನಿ ದೇವಯ್ಯ ಮಾತನಾಡಿ, ಮಕ್ಕಳಿಗೆ ಕಿರಿಯ ವಯಸ್ಸಿನಲ್ಲಿಯೇ ಎಲ್ಲ ಜಾತಿ, ಧರ್ಮಗಳ ಹಬ್ಬ ಹರಿದಿನಗಳ ಕುರಿತು ಮಾಹಿತಿ ನೀಡಿ ಅದರ ಆಚರಣೆ ಹಿನ್ನೆಲೆಯನ್ನು ತಿಳಿಸಬೇಕಿದೆ. ಶಾಂತಿ, ಸೌಹಾರ್ದದಿಂದ ಬದುಕುವ ಬಗ್ಗೆ ಹೇಳಿಕೊಡಬೇಕಿದೆ. ಕಿರಿಯ ವಯಸ್ಸಿನಲ್ಲಿ ಉತ್ತಮ ಸಂಸ್ಕಾರ ನೀಡಿ ಬೆಳೆಸಿದರೆ ಉನ್ನತ ಸ್ಥಾನಕ್ಕೆ ತಲುಪಲಿದ್ದಾರೆ ಎಂದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಶಾಲೆಯ ಪುಟಾಣಿ ಮಕ್ಕಳು ಸಾಂತಾಕ್ಲಾಸ್ ವೇಷಧಾರಿಯೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಶಾಲೆಯಲ್ಲಿ ಏಸುಕ್ರಿಸ್ತನ ಜನನ ವೃತ್ತಾಂತವನ್ನು ತಿಳಿಸುವ ಆಕರ್ಷಕ ಗೋದಲಿ ನಿರ್ಮಿಸಲಾಗಿತ್ತು. ಶಿಕ್ಷಕರಾದ ದೀಪಿಕಾ, ಅಶ್ವಿನಿ, ರೇಷ್ಮಾ, ಜಾಫ್ರಿನ್ ಮತ್ತಿತರರಿದ್ದರು.