

ಮೂಡಿಗೆರೆ: ನಿರಂತರ ಸುಳ್ಳು ಸುದ್ದಿಗಳನ್ನು ಹರಡಿ ಜನರ ದಿಕ್ಕುತಪ್ಪಿಸಿ ಬಿಜೆಪಿ ಕೇಂದ್ರ ಮತ್ತು ವಿವಿಧ ರಾಜ್ಯದಲ್ಲಿ ಅಧಿಕಾರ ಪಡೆದಿದೆ ಹೊರತು ಸತ್ಯವನ್ನು ಜನರ ಮುಂದಿಟ್ಟು ಅಧಿಕಾರ ಹಿಡಿಯುತ್ತಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ್ ರೈ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಜೈ ಬಾಪು, ಜೈಭೀಮ್, ಜೈಸಂವಿಧಾನ ಸಮಾವೇಶದ ಪೂರ್ವಭಾವಿ ಸಮಾವೇಶದಲ್ಲಿ ಮಾತನಾಡಿದರು.
ಕಾಂಗ್ರೆಸ್ ಗಾಂಧೀಜಿ ಅವರ ಸತ್ಯ, ಅಹಿಂಸಾ ತತ್ವ, ಅಂಬೇಡ್ಕರ್ ವಿಚಾರಧಾರೆ ಹಾಗೂ ಸಂವಿಧಾನದ ಆಶಯಗಳನ್ನು ಜನರಲ್ಲಿ ಜಾಗೃತಿ ಮೂಡಿಸಿದರೆ ಬಿಜೆಪಿಯನ್ನು ಶಾಶ್ವತವಾಗಿ ಅಧಿಕಾರದಿಂದ ದೂರವಿಡಲು ಸಾಧ್ಯ. ಕಾಂಗ್ರೆಸ್ ನಡೆಸುವ ಸಮಾವೇಶ ಜನಸೇರಿಸುವ ಉದ್ದೇಶ ಹೊಂದಿಲ್ಲ. ಮಹಾತ್ಮಗಾಂಧಿ, ಅಂಬೇಡ್ಕರ್ ಹಾಗೂ ಸಂವಿಧಾನದ ವಿಚಾರಗಳ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವಾಗಲಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವವರ ಪಾಲಿಗೆ ಗಾಂಧೀಜಿ, ಅಂಬೇಡ್ಕರ್ ಹಾಗೂ ಸಂವಿಧಾನದಿಂದಾಗಿ ಸಾಮಾಜಿಕ ನ್ಯಾಯ, ಸ್ವಾತಂತ್ರೃ, ಸಮಾನತೆ ದೊರಕಿದೆ. ಈ ವಿಚಾರಗಳನ್ನು ಅರಿತುಕೊಂಡರೆ ದೇಶವನ್ನು ಜಾಗೃತಗೊಳಿಸಲು ಸಾಧ್ಯ ಎಂದು ತಿಳಿಸಿದರು.
100 ವರ್ಷದ ಹಿಂದೆ ಬೆಳಗಾವಿಯಲ್ಲಿ ಮಹಾತ್ಮಗಾಂಧೀಜಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಅದು ಈಗ ಐತಿಹಾಸಿಕ ದಿನವಾಗಿದೆ. ಅದೇ ಸ್ಥಳದಲ್ಲಿ ಈಗ ಸಮಾವೇಶ ನಡೆಯುತ್ತಿರುವುದು ಪಕ್ಷಕ್ಕೆ ಹೆಮ್ಮೆ ತಂದಿದೆ. ಜವಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಹಲವು ಮಂದಿ ಕಾಂಗ್ರೆಸಿನ ಪ್ರಧಾನಿಗಳ ಅವಧಿಯಲ್ಲಿ ದೇಶಾದ್ಯಂತ ಸಮಾವೇಶ, ಅಧಿವೇಶನಗಳು ನಡೆದಿದೆ. ಇದರ ಫಲವಾಗಿ ಹಲವಾರು ಶಾಶ್ವತ ಯೋಜನೆಗಳು ಜಾರಿಯಾಗಿವೆ ಎಂದರು.
ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆ ಜನರ ಸಬಲೀಕರಣಕ್ಕಾಗಿ ಪ್ರಮುಖ ಪಾತ್ರ ವಹಿಸಿದೆ. ಜನರ ಬದುಕಿಗಾಗಿ ಆಡಳಿತ ನಡೆಸುವ ಕಾಂಗ್ರೆಸ್ ದೇಶದ ಏಕತೆ, ಸಮಗ್ರತೆ ಮತ್ತು ಸಾಮರಸ್ಯ ಕಾಪಾಡುವ ಪಕ್ಷವಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹೇಶ್, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ಮುಖಂಡರಾದ ಅಕ್ರಂ ಹಾಜಿ, ಬಿ.ಎಸ್.ಜಯರಾಮ್, ಸಿ.ಕೆ.ಇಬ್ರಾಹಿಂ, ಸಂಪತ್, ಎಂ.ಎನ್.ಅಶ್ವತ್ಥ್, ಟಿ.ಕಮಲಾಕ್ಷಿ, ಜಯಮ್ಮ ಇತರರಿದ್ದರು.