

ಸಂವಿಧಾನದ ಮೂಲಕ ಎಲ್ಲರ ಕಣ್ಣನ್ನು ತೆರೆಸಿದವರು ಡಾ.ಬಿ.ಆರ್.ಅಂಬೇಡ್ಕರ್, ಯಾರನ್ನೂ ನೋಯಿಸದೆ ನೈತಿಕವಾಗಿ ಬದುಕು ಕಟ್ಟಿಕೊಳ್ಳಲು ಸಂವಿಧಾನ ಎಡೆಮಾಡಿಕೊಟ್ಟಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಒಂದು ಮತ ಎಂದು ಮತದಾನದ ಹಕ್ಕು ನೀಡುವ ಮೂಲಕ ಅತ್ಯುತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಅಧಿಕಾರವನ್ನು ಎಲ್ಲರಿಗೂ ನೀಡಿದರು.
ಅಂಬೇಡ್ಕರ್ ಪರಿಪಕ್ವ, ಪರಿಪೂರ್ಣ ಚಿಂತಕರು. ಅವರು ಕಾನೂನು ತಜ್ಞರು, ರಾಜಕೀಯ ನೇತಾರರು, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರು, ಶ್ರೇಷ್ಠ ಇತಿಹಾಸಕಾರರು, ಮಹಾದಾರ್ಶನಿಕರು, ಅಪ್ರತಿಮ ಚಿಂತಕರು, ಮಾನವಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು. ಅವರು ಆಧುನಿಕ ಭಾರತ ಬಹುಮುಖ ಪ್ರತಿಭೆಯಾಗಿದ್ದರು. ಅವರ ಬಹುಮುಖಿ ಪ್ರತಿಭೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಪ್ರತಿಯೊಬ್ಬರೂ ಸ್ವತಂತ್ರವಾಗಿ ಜೀವಿಸುತ್ತಿರುವುದಕ್ಕೆ ಕಾರಣ ನಮ್ಮ ಸಂವಿಧಾನ. ಅಂತಹ ಸಂವಿಧಾನವನ್ನು ನಮಗೆ ಕೊಟ್ಟವರು ಡಾ. ಬಿ.ಆರ್.ಅಂಬೇಡ್ಕರ್. ಅವರ ಬದುಕು-ಬರಹ ಮತ್ತು ಹೋರಾಟವೇ ಭಾರತಕ್ಕೆ ಸ್ಫೂರ್ತಿಯಾಗಿದೆ ಎಂದರು.
ಛಿದ್ರಗೊಂಡಿದ್ದ ಸಮಾಜವನ್ನು ಒಂದುಗೂಡಿಸುವ ನೆಲೆಗಳನ್ನು ಕಟ್ಟುವಲ್ಲಿ ಅವರ ಪಾತ್ರ ಅವಿಸ್ಮರಣೀಯವಾಗಿದೆ. ಬದುಕಿನ ಉದ್ದಕ್ಕೂ ಎಲ್ಲರನ್ನೂ ಒಳಗೊಳ್ಳುವ ಚರಿತ್ರೆಯ ನಿರ್ಮಾಣದ ಹಾದಿಯನ್ನು ನಿರ್ಮಿಸಿ, ಪ್ರತಿಯೊಬ್ಬ ಭಾರತೀಯರ ಬೆಳವಣಿಗೆಗೆ ಮುಕ್ತ ಅವಕಾಶವನ್ನು ಕಲ್ಪಿಸಿದ ಕೀರ್ತಿ ಅಂಬೇಡ್ಕರ್ ಅವರದ್ದು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಕತ್ತಲೆಯಲ್ಲಿ ಬದುಕುತ್ತಿದ್ದಂತಹ ಜನರಿಗೆ ಬೆಳಕು ನೀಡಿ, ಚೇತನ ತುಂಬಿ ಶಕ್ತಿಯನ್ನು ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್. ಇಡೀ ಸಮಗ್ರ ಜನತೆಗೆ ಅವರು ಕೊಟ್ಟಿರುವಂತಹ ಸಂವಿಧಾನವಿಂದು ಎಲ್ಲರಿಗೂ ದಾರಿ ದೀಪವಾಗಿದೆ. ಅದನ್ನು ನಾವು ಅನುಸರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಶಿಕ್ಷಣ, ಸಮಾನತೆ , ಬ್ರಾತೃತ್ವ ಎಂಬ ಮೂರು ಆಧಾರ ಸ್ತಂಭಗಳನ್ನು ನಮಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ್ದಾರೆ. ಅವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಆಲೋಚನೆಗಳನ್ನು ಹಾಗೂ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ನೀವು ಅವರಲ್ಲಿ ಒಬ್ಬ ಮಹಾನ್ ವ್ಯಕ್ತಿ ಯಾಗಬೇಕು ಎಂದರು.
ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಎಲ್ಲ ಜಾತಿ, ಧರ್ಮದ ಮಹಿಳೆಯರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಧ್ವನಿ ನೀಡಿದ್ದಾರೆ ಎಂದರು.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜೆ.ಬಿ.ಮಂಜುನಾಥ್ ಮುಖ್ಯ ಭಾಷಣ ಮಾಡಿದರು. ಶಾಸಕ ಟಿ.ಎಸ್.ಶ್ರೀವತ್ಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮುಡಾ ಆಯುಕ್ತ ಎ.ಎನ್.ರಘುನಂದನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ, ಸಹಾಯಕ ನಿರ್ದೇಶಕ ಎ.ಎನ್.ಜನಾರ್ಧನ್ ಇತರರಿದ್ದರು.
ಇದಕ್ಕೂ ಮೊದಲು ಪುರಭವನ ಆವರಣದಿಂದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿದ್ದ ಸ್ತಬ್ಧಚಿತ್ರದ ಮೆರವಣಿಗೆಗೆ ನಡೆಯಿತು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮೆರವಣಿಗೆ ಹಸಿರು ನಿಶಾನೆ ತೋರಿದರು. ನಂತರ,ಪೂರ್ಣಕುಂಭ ಹೊತ್ತ ಮಹಿಳೆಯರು ಮುಂದಡಿ ಇಡುತ್ತಿದ್ದಂತೆ ಜಾನಪದ ಕಲಾತಂಡಗಳು,ಅಶೋಕನ ಧಮ್ಮಚಕ್ರವಿದ್ದ ಭಾವಚಿತ್ರವುಳ್ಳ ಸ್ತಬ್ಧಚಿತ್ರ ಸಾಗಿತು.