

ಎಚ್.ಡಿ.ಕೋಟೆ: ದೇಶಕ್ಕೆ ಬೃಹತ್ ಸಂವಿಧಾನ ಕೊಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿ ಹಲವು ಧರ್ಮಗಳು, ಬಹು ಸಂಸ್ಕೃತಿ, ವೈವಿಧ್ಯತೆಯಿಂದ ಕೂಡಿರುವ ದೇಶವಾದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆ ಹಾಗೂ ಏಕತೆಯನ್ನು ಸಾರುತ್ತಿದೆ ಎಂದರು.
ಇಂದು ನಾನು ಶಾಸಕನಾಗಿ ಆಯ್ಕೆಯಾಗಲು ಸಂವಿಧಾನದಲ್ಲಿ ನೀಡಿರುವ ಅವಕಾಶದಿಂದ ಸಾಧ್ಯವಾಯಿತು. ಭಾರತದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಬೇಕು, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಆಗದಂತೆ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಸಾಹಿತಿ ಡಾ.ಕಿರಣ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ತಾವು ಅನುಭವಿಸಿದ ಕಷ್ಟಗಳಿಗೆ ಸಂವಿಧಾನದಲ್ಲಿ ಉತ್ತರ ಹುಡುಕುವ ಕೆಲಸ ಮಾಡಿದರು ಎಂದರೆ ತಪ್ಪಾಗಲಾರದು. ಸಂವಿಧಾನದ ಪ್ರತಿ ಪುಟದಲ್ಲಿ ಅಂಬೇಡ್ಕರ್ ಗೋಚರಿಸಿದರೆ, ಪ್ರತಿ ಶಬ್ದದಲ್ಲಿ ಅಲ್ಲಿರುವ ಭಾವನೆ ಅರ್ಥ ಆಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲಿಗೆ ತಹಸೀಲ್ದಾರ್ ರತ್ನಾಂಬಿಕಾ ಅವರು ತಾಲೂಕು ಆಡಳಿತ ಸೌಧದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿವಿಧ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕುಸ್ತಿ ಕ್ರೀಡೆಯಲ್ಲಿ ಪದಕ ಪಡೆದ ಪಟ್ಟಣದ ವಡ್ಡರಗುಡಿ ನಾಗೇಶ್ ಅವರನ್ನು ಹಾಗೂ ರಾಷ್ಟ್ರ ಮಟ್ಟಕ್ಕೆ ಬಾಲ್‌ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಆಯ್ಕೆಯಾದ ಬೀಚನಹಳ್ಳಿ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಂತರ ಪಟ್ಟಣದ ವರದರಾಜ ಸ್ವಾಮಿ ದೇವಸ್ಥಾನದ ಆವರಣದಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಅಂಬೇಡ್ಕರ್ ಮತ್ತು ಗಾಂಧಿಜಿಯವರ ಭಾವಚಿತ್ರವನ್ನು ಇಟ್ಟು ಮಂಗಳ ವಾದ್ಯದೊಂದಿಗೆ ಸ್ತಬ್ಧಚಿತ್ರ ಮೆರವಣಿಗೆ ಮಾಡಲಾಯಿತು.
ಪುರಸಭಾ ಅಧ್ಯಕ್ಷೆ ಅನಿತಾ ನಿಂಗನಾಯಕ, ಸದಸ್ಯರಾದ ಎಚ್.ಸಿ. ನರಸಿಂಹಮೂರ್ತಿ, ಶಾಂತಮ್ಮ, ಕನ್ನಡ ಪ್ರಮೋದ್, ಇಒ ರಾಜೇಶ್ ಜೆರಾಲ್ಡ್, ಗ್ರೇಡ್-2 ತಹಸೀಲ್ದಾರ್ ಸಣ್ಣರಾಮಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜು, ಡಾ.ಕಿರಣ್ ಶಿಡ್ಲಳ್ಳಿ, ಜೀವಿಕ ಬಸವರಾಜು, ಬಿಇಒ ಉದಯ್‌ಕುಮಾರ್, ಸರ್ವೇ ಎಡಿ ಜಗನ್ನಾಥ್, ಪುರಸಭಾ ಸಿಇಒ ಸುರೇಶ್, ಎಇಇ ಬೋರಯ್ಯ, ನಾಗರಾಜು, ರಾಮಪ್ರಸಾದ್, ನಾರಾಯಣಸ್ವಾಮಿ, ಆಶಾ, ಶಶಿಕಲಾ, ರಂಗಸ್ವಾಮಿ, ರಾಮೇಗೌಡ, ಡಾ.ಪೂರ್ಣಾನಂದ ಇದ್ದರು.