ಸಂವಿಧಾನ ಎಲ್ಲರನ್ನೂ ಸೇರಿಸುವ ಕೊಂಡಿ

1
Published on

ಡಾ.ಬಿ.ಆರ್.ಅಂಬೇಡ್ಕರ್ ಅವರ ನೀಡಿರುವ ಸಂವಿಧಾನವೇ ನಮ್ಮ ಗ್ರಂಥವಾಗಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ (ಜನ್ನಿ) ಹೇಳಿದರು.

ನಗರದ ಪ್ರಸಾರಾಂಗದ ಆವರಣದ ಕುವೆಂಪು ಸಭಾಂಗಣದಲ್ಲಿ ಸಹೃದಯ ಬಳಗದ ವತಿಯಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹದೇವಸ್ವಾಮಿ ಕಪ್ಪಸೋಗೆ ಅವರ ‘ಸೇರುವ ದಾರಿ’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ವೇದ, ಉಪನಿಷತ್ತುಗಳು ಸಾವಿರಾರು ವರ್ಷಗಳಿಂದ ನಮ್ಮ ಹಾದಿಯನ್ನು ಬೇರೆ ಬೇರೆ ಮಾಡಿದೆ. ಆದರೆ ಸಂವಿಧಾನ ಎಲ್ಲರನ್ನೂ ಸೇರಿಸುವ ಕೊಂಡಿಯಾಗಿದೆ. ಎಲ್ಲರನ್ನೂ ಸೇರಿಸುವ ಸಂವಿಧಾನ ನಮ್ಮ ಸಾಮಾಜಿಕ, ಆರ್ಥಿಕ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಹಕ್ಕಿನ ಬಗ್ಗೆ ಮಾತನಾಡುತ್ತದೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಅವರೆಲ್ಲರೂ ಒಂದೊಂದು ಹೊಸ ಭಾರತವನ್ನು ನಿರ್ಮಾಣ ಮಾಡಿದವರು. ಅಂಬೇಡ್ಕರ್ ಅವರು ನೋವಿಗೆ ಸ್ಪಂದಿಸಿದವರು. ಈ ದೇಶದಲ್ಲಿ ಹುನ್ನಾರದಿಂದ ಹುಟ್ಟುಹಾಕಿದ ವೇದ, ಉಪನಿಷತ್ತುಗಳು ಸಮಾಜದ ಒಳಿತಿಗೆ ದಾರಿಯೇ ತೋರಿಸದ ಹಾಗೂ ಅಡ್ಡದಾರಿಯನ್ನು ಹಿಡಿಯುವಂತಹ ಒಂದು ನಿಖರವಾದಂತಹ ಗ್ರಂಥಗಳಾಗಿವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಬಿಟ್ಟು ಹೋಗುತ್ತಿರುವ ಸಮಯದಲ್ಲೇ ದೇಶವನ್ನೇ ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂದು ನಾವು ದೇಶ, ಭಾಷೆ, ಸಂಸ್ಕೃತಿ, ಸಮಾಜ ಹಾಗೂ ನಮ್ಮ ಒಳಿತಿಗಾಗಿ ಸೇರುವ ದಾರಿಯನ್ನು ಹುಡುಕಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಚಿಂತಕ ಪ್ರೊ.ಸಿ.ನಾಗಣ್ಣ, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಅಕ್ಕ ಐ.ಎ.ಎಸ್. ಅಕಾಡೆಮಿಯ ನಿರ್ದೇಶಕ ಹಾಗೂ ಸಾಹಿತಿ ಡಾ.ಶಿವಕುಮಾರ್, ಕಾದಂಬರಿ ಲೇಖಕ ಮಹದೇವಸ್ವಾಮಿ ಕಪ್ಪಸೋಗೆ, ರಸಿಕ ಎಸ್.ಯಡಕೊಳ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net