

ಬೀರೂರು: ಪಟ್ಟಣದ ಕರಗಲ್ ಬೀದಿಯಲ್ಲಿ ನೆಲೆಸಿರುವ ಗ್ರಾಮ ದೇವತೆ ಶ್ರೀ ಅಂತರಘಟ್ಟಮ್ಮ ದೇವಿ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಸೋಮವಾರ ರಾತ್ರಿ ವಿಶೇಷ ಪೂಜಾ ಕಾರ್ಯಗಳ ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿ ಅಲಂಕರಿಸಲ್ಪಟ್ಟ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಹರಕೆ ಹೊತ್ತ ಮಹಿಳೆಯರು ದುಗ್ಗಳ ಸೇವೆ ನೆರವೇರಿಸಿದರು. ಜತೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು.
ಮಂಗಳವಾರ ಬೆಳಗ್ಗೆ ದೇವಿಯ ಮೂಲಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ಬೇವಿನ ಸೀರೆ ಸೇವೆ, ಹೋಳಿಗೆ ನೈವೇದ್ಯ ಸಮರ್ಪಿಸಲಾಯಿತು. ಮಧ್ಯಾಹ್ನ 3.30ಕ್ಕೆ ಕರಗಲ್ ಬೀದಿಯಲ್ಲಿರುವ ದೇವಾಲಯದ ಮುಂಭಾಗದಿಂದ ಚೋಮನ ಕುಣಿತ, ಅಸಾದಿ ಪದಗಳು ಹಾಗೂ ವಿವಿಧ ಜಾನಪದ ವಾದ್ಯಗಳ ನಡುವೆ ಸಹಸ್ರಾರು ಭಕ್ತರು ಕರಗಲ್ ಬೀದಿಯಲ್ಲಿ ಜಯಘೋಷಗಳನ್ನು ಕೂಗುತ್ತ ರಥವನ್ನು ಹಳೇಪೇಟೆಗೆ ಎಳೆದುತಂದರು.
ರಥವು ಕರಗಲ್ ಬೀದಿಯಲ್ಲಿ ಸಾಗುವ ವೇಳೆ ಭಕ್ತರು ಹಣ್ಣು, ಕಾಯಿ ನೀಡಿ ದೇವಿಗೆ ಮಂಗಳಾರತಿ ಮಾಡಿಸಿದರು. ಹಳೇಪೇಟೆಯ ಆಂಜನೇಯ ಸ್ವಾಮಿ ದೇವಾಲಯದ ಬಳಿ ಬಂದು ರಥವು ಸಂಪಿಗೆ ಸಿದ್ದೇಶ್ವರ ದೇವಾಲಯದ ಬಳಿ ನೆಲೆಸಿದಾಗ ಪಾನಕದ ಎತ್ತಿನ ಬಂಡಿಗಳು ರಥವನ್ನು ಹಿಂಬಾಲಿಸಿ ಒಂದೊಂದಾಗಿ ಬರಲಾರಂಭಿಸಿದವು. ಅಕ್ಕಪಕ್ಕದಲ್ಲಿ ನೆರೆದಿದ್ದ ಜನಸ್ತೋಮ ಕೇಕೆ ಶಿಳ್ಳೆ ಹಾಕುತ್ತ ಎತ್ತಿನ ಗಾಡಿಗಳನ್ನು ಬರಮಾಡಿಕೊಂಡರು. ಎತ್ತಿನ ಬಂಡಿಗಳು ವೇಗವಾಗಿ ಬರುತ್ತಿದ್ದನ್ನು ಕಂಡು ರೋಮಾಂಚನಗೊಂಡರು.
ಮಹಾನವಮಿ ಬಯಲಿನವರೆಗೆ ರಥವನ್ನು ಎಳೆದು ಪುನಃ ದೇವಸ್ಥಾನದ ಆವರಣಕ್ಕೆ ತರಲಾಯಿತು. ಮಹಾನವಮಿ ಬಯಲಿನಲ್ಲಿರುವ ಅಂತರಘಟ್ಟಮ್ಮ ದೇವಾಲಯಕ್ಕೂ ತೆರಳಿದ ಬಂಡಿ ಓಡಿಸುವವರು ಅಲ್ಲಿ ಪಾನಕ ವಿತರಿಸಿದರು. ಯುವಕರು ಎತ್ತಿನ ಬಂಡಿಗಳು ಓಡುವ ರಸ್ತೆಯ ಮಧ್ಯೆಯೇ ನಿಂತು ಗಾಡಿಗಳನ್ನು ಹುರಿದುಂಬಿಸುವ ದೃಶ್ಯ ಸಾಮಾನ್ಯವಾಗಿದ್ದು, ಪೊಲೀಸರು ಜನರನ್ನು ತಹಬಂದಿಗೆ ತರಲು ಸಾಕಷ್ಟು ಶ್ರಮಿಸಬೇಕಾಯಿತು. 60ಕ್ಕೂ ಹೆಚ್ಚು ಬಂಡಿಗಳು ಓಟದಲ್ಲಿ ಪಾಲ್ಗೊಂಡವು. ಫೆ.8ರಬೆಳಗಿನ ಜಾವ ಕಡೂರು ತಾಲೂಕಿನ ಅಂತರಘಟ್ಟೆಯ ಮೂಲಸ್ಥಾನದಲ್ಲಿ ಮಹಾರಥೋತ್ಸವವು ನಡೆಯಲಿದ್ದು ಭಕ್ತರು ಅಲ್ಲಿಗೆ ತೆರಳಲು ಸಿದ್ಧತೆ ನಡೆಸುವರು.