

ರಾಜ್ಯ, ದೇಶಕ್ಕೆ ಅಗತ್ಯವಾದ ಕಾನೂನುಗಳನ್ನು ರೂಪಿಸುವವರೇ ಜನಪ್ರತಿನಿಧಿಗಳು. ಆಧಿಕಾರದ ಬಲ ಅದರ ಜತೆಗೇ ಜನರ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ಇವರ ಮೇಲಿರುತ್ತದೆ. ಹಾಗಾಗಿಯೇ, ಜನಪ್ರತಿನಿಧಿಗಳು ಶುದ್ಧ ಚಾರಿತ್ರ್ಯ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿರಬೇಕು. ರಾಜಕೀಯ ವ್ಯವಸ್ಥೆ ಕ್ರಮೇಣ ಅಪಸವ್ಯಗಳಿಂದ ದೂರವಾಗಬೇಕು ಎಂಬ ಆಶಯ ಹಲವು ದಶಕಗಳಿಂದಲೇ ಇದೆ. ಆದರೆ, ವಾಸ್ತವವೇನು? ಜನಸಾಮಾನ್ಯರು ರಾಜಕೀಯದ ಅವ್ಯವಸ್ಥೆಯಿಂದ ರೋಸಿಹೋಗಿದ್ದಾರೆ. ಜನಪ್ರತಿನಿಧಿಗಳ ವರ್ತನೆಯಿಂದ ಬೇಸತ್ತಿದ್ದಾರೆ. ನಮ್ಮಲ್ಲಿ ಪ್ರಜಾಪ್ರಭುತ್ವವೇನೋ ಇದೆ. ಆದರೆ, ಜನರು ಮತ ಹಾಕಬೇಕಿರುವುದು ರಾಜಕೀಯ ಪಕ್ಷಗಳು ಆಯ್ಕೆ ಮಾಡಿದ ‘ಅಭ್ಯರ್ಥಿ’ಗಳಿಗೇ. ಆದರೆ, ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿದವರ ಸಂಖ್ಯೆ ರಾಜಕೀಯದಲ್ಲಿ, ಶಾಸನಸಭೆಗಳಲ್ಲಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ದೇಶದಲ್ಲಿ ಸುಮಾರು 5 ಸಾವಿರ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ವಿಚಾರಣೆ ಬಾಕಿ ಇದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಸೇರಿ ಐದು ರಾಜ್ಯಗಳಲ್ಲಿ ಇದೇ ತಿಂಗಳು ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಆದರೆ, ಎಲ್ಲ ಪಕ್ಷಗಳೂ ಪೈಪೋಟಿಗೆ ಬಿದ್ದಂತೆ ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳವರಿಗೆ ಮಣೆ ಹಾಕಿದ್ದಾರೆ. ಇದು ಬರೀ ಐದು ರಾಜ್ಯಗಳ ಸ್ಥಿತಿಯಲ್ಲ. ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ನಡೆದಾಗಲೂ ಅಭ್ಯರ್ಥಿಗಳ ಹಿನ್ನೆಲೆಯನ್ನು ಗಮನಿಸಿದರೆ ಗಾಬರಿಯಾಗುತ್ತದೆ. 2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪೈಕಿ (ಇವರೀಗ ಸಂಸದರು!) ಶೇ.43 ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. 2014ರ ಲೋಕಸಭೆಗೆ ಹೋಲಿಸಿದರೆ ಈ ಸಂಖ್ಯೆ ಶೇ.26ರಷ್ಟು ಹೆಚ್ಚು.
ಜನಪ್ರತಿನಿಧಿಗಳ ಮೇಲಿನ ಅಪರಾಧ ಪ್ರಕರಣಗಳ ವಿಚಾರಣೆಗೆಂದೇ ವಿಶೇಷ ನ್ಯಾಯಾಲಯಗಳನ್ನೇನೋ ಸ್ಥಾಪಿಸಲಾಗಿದೆ. ಆದರೆ, ಇಂಥ ಪ್ರಕರಣ ಇತ್ಯರ್ಥ ಪಡಿಸಲು ಕಾಲಮಿತಿ ನಿಗದಿ ಮಾಡಿಲ್ಲ. ಸಂಬಂಧಿತ ಜನಪ್ರತಿನಿಧಿ ತಪ್ಪಿತಸ್ಥನಾಗಿದ್ದರೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಬೇಕು. ಆದರೆ, ರಾಜಕೀಯ ಕಾರಣಗಳಿಗಾಗಿ ಆರೋಪ ಹೊತ್ತಿರುವ ನಿರಪರಾಧಿಗಳು ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಸಾರ್ವಜನಿಕ ಜೀವನನಲ್ಲಿ ಗೌರವದಿಂದ ಸಾಗಲು ಸಾಧ್ಯವಿಲ್ಲ. ಕೊನೆಗೊಮ್ಮೆ, ನಿರಪರಾಧಿ ಎಂದು ಸಾಬೀತಾದರೂ ಆದ ನಷ್ಟ ಭರ್ತಿ ಮಾಡಲು ಸಾಧ್ಯವಿಲ್ಲ. ಟಿಕೆಟ್ ಹಂಚಿಕೆಯ ವ್ಯವಸ್ಥೆಯಲ್ಲೇ ಇನ್ನಷ್ಟು ಪಾರದರ್ಶಕತೆ ತಂದು ಉತ್ತಮ ವ್ಯಕ್ತಿತ್ವದವರಿಗೆ ಆದ್ಯತೆ ನೀಡುವಂತಾಗಬೇಕು. ಜತೆಗೆ, ಜನಪ್ರತಿನಿಧಿಗಳ ಮೇಲಿನ ಇಂಥ ಪ್ರಕರಣಗಳು ಕಾಲಮಿತಿಯಲ್ಲಿ ಇತ್ಯರ್ಥಗೊಳ್ಳುವಂತಾಗಬೇಕು.