ಸಂಪಾದಕೀಯ: ಮತಹಕ್ಕು ಚಲಾಯಿಸಿ

vote
Published on

ಹದಿನೆಂಟನೇ ಲೋಕಸಭೆ ಚುನಾವಣೆಯ ಎರಡನೇ ಹಂತಕ್ಕೆ ದೇಶ ಸಜ್ಜಾಗಿದೆ. ನಾಳೆ (ಏಪ್ರಿಲ್ 26) ಕರ್ನಾಟಕ ಸೇರಿದಂತೆ 12 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನಕ್ಕೆ ಸರ್ವಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ. ಕರ್ನಾಟಕದ ಮಟ್ಟಿಗೆ ಇದು ಚುನಾವಣೆಯ ಮೊದಲನೇ ಹಂತವಾಗಿದ್ದು, ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯಲಿದೆ. ಮೇ 7ರಂದು ಎರಡನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಯ ಹಂತದ ಮತದಾನದ ಬಳಿಕ ಜೂನ್ 4ರಂದು ಫಲಿತಾಂಶ ಘೋಷಣೆಯಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಚುನಾವಣಾ ಪ್ರಕ್ರಿಯೆಯನ್ನು ವಿಶ್ವದ ಇತರ ದೇಶಗಳು ಕೂಡ ಕುತೂಹಲದಿಂದ ಗಮನಿಸುತ್ತಿವೆ. ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವ ಸದಾವಕಾಶ ಈಗ ಮತದಾರರ ಕೈಯಲ್ಲಿದ್ದು, ಯಾವ ಸಬೂಬು ಹೇಳದೆ, ಸಿನಿಕತೆಯನ್ನು ಪ್ರದರ್ಶಿಸದೆ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಬದ್ಧತೆಯನ್ನು ತೋರಬೇಕಿದೆ.

ಇತ್ತೀಚಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದು ಕಳವಳದ ವಿಚಾರ. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ದೊಡ್ಡಪರ್ವ. ಮತದಾನದಿಂದ ದೂರ ಉಳಿದರೆ ಜನಪ್ರತಿನಿಧಿಗಳನ್ನು, ಸರ್ಕಾರವನ್ನು ಪ್ರಶ್ನಿಸುವ ನೈತಿಕತೆಯಿಂದಲೂ ವಂಚಿತರಾದಂತೆ ಆಗುತ್ತದೆ. ಭಾರತ ಹಲವು ರಂಗಗಳಲ್ಲಿ ಮಹತ್ತರ ಸಾಧನೆಗಳ ಮೂಲಕ ಗಮನ ಸೆಳೆಯುತ್ತಿದೆ. ಜಾಗತಿಕ ಶಕ್ತಿಯಾಗಿ ರೂಪುಗೊಳ್ಳುತ್ತಿದೆ ಎಂಬುದು ಸಂತಸದ ವಿಚಾರವೇ. ಆದರೆ, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ (144 ಕೋಟಿಗೂ ಅಧಿಕ) ಹೊಂದಿರುವ, ಸುಮಾರು 97 ಕೋಟಿ ಮತದಾರರನ್ನು ಹೊಂದಿರುವ ರಾಷ್ಟ್ರದಲ್ಲಿ ಶೇಕಡ 100ರಷ್ಟು ಮತದಾನದ ಕನಸು, ಆಶಯ ನೆರವೇರುತ್ತಿಲ್ಲ ಎಂಬುದು ವಾಸ್ತವ. ದೇಶಕ್ಕೆ ಸಮರ್ಥ ನಾಯಕತ್ವವನ್ನು ಒದಗಿಸಲು ಮತ್ತು ಜನಾನುರಾಗಿ ಜನಪ್ರತಿನಿಧಿಗಳನ್ನು ಆರಿಸಲು ಪ್ರಜೆಗಳಿಗೆ ಸಿಕ್ಕಿರುವ ಮಹಾ ಅವಕಾಶವಿದು. ಸಾಮಾನ್ಯವಾಗಿ ಜನರು ಸರ್ಕಾರ, ಜನಪ್ರತಿನಿಧಿಗಳ ಬಗ್ಗೆ ದೂರುವುದು ಹೆಚ್ಚು. ಆದರೆ, ಒಳ್ಳೆಯವರನ್ನು ಆಯ್ಕೆ ಮಾಡುವ, ಮತಾಧಿಕಾರ ಚಲಾಯಿಸುವ ಸಂದರ್ಭ ಬಂದಾಗ ಇನ್ನಿಲ್ಲದ ಉದಾಸೀನ ಆವರಿಸಿಕೊಂಡು ಬಿಡುತ್ತದೆ. ‘ನನ್ನದೊಂದು ಮತದಿಂದ ದೇಶ ಉದ್ಧಾರ ಆಗಲಿಕ್ಕುಂಟಾ’ ಎಂಬ ಸಿನಿಕತೆ ಪ್ರಜಾತಂತ್ರದ ಮೌಲ್ಯಗಳಿಗೇ ಹಾನಿಕಾರಕ. ಇತ್ತೀಚಿನ ಚುನಾವಣೆಗಳಲ್ಲಂತೂ ನಗರಪ್ರದೇಶದವರು, ಅಕ್ಷರಸ್ಥರೇ ಮತದಾನ ದಿಂದ ವಿಮುಖವಾಗುತ್ತಿರುವುದು ಖಂಡಿತವಾಗಿಯೂ ಉತ್ತಮ ಬೆಳವಣಿಗೆಯಲ್ಲ. ಮತದಾನಕ್ಕಾಗಿ ನೀಡುವ ರಜೆಯನ್ನು ಎಷ್ಟೋ ಜನರು ಪ್ರವಾಸ, ಮನರಂಜನೆಗೆ ಬಳಸುವ ನಿದರ್ಶನಗಳುಂಟು. ಪ್ರವಾಸ, ಮನರಂಜನೆಗೆ ಮತ್ತೆ ಸಮಯ ಸಿಗಬ ಹುದು. ಆದರೆ, ಚುನಾವಣೆ ಎಂಬ ಉತ್ಸವ ಐದು ವರ್ಷಗಳಿಗೊಮ್ಮೆ ಬರುವಂಥದ್ದು.

ದೇಶವನ್ನು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಯ ಹಾದಿಯಲ್ಲಿ, ಹೊಸ ಸಾಧನೆಗಳ ಪಥದಲ್ಲಿ ಕೊಂಡೊಯ್ಯುವ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡುವ ಶಕ್ತಿ ಶ್ರೀಸಾಮಾನ್ಯನ ಮತಕ್ಕೆ ಇದೆ. ಈ ಬಾರಿಯಾದರೂ ಸಬೂಬುಗಳನ್ನು ಬದಿಗಿಟ್ಟು ಮತಾಧಿಕಾರವನ್ನು ಚಲಾಯಿಸೋಣ, ನಮ್ಮ ಸುತ್ತಮುತ್ತಲೂ ಈ ಬಗ್ಗೆ ಅರಿವು ಮೂಡಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net