ಸಂಪಾದಕೀಯ | ಪರಿಸರ ರಕ್ಷಣೆಗೆ ಆದ್ಯತೆ; ಸಾಮೂಹಿಕ ಪ್ರಯತ್ನಗಳು ಹೆಚ್ಚಬೇಕು

Editorial
Published on

ಪರಿಸರ ಮಾಲಿನ್ಯದ ಪರಿಣಾಮ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ಗಾಢ ಪರಿಣಾಮ ಈಗಾಗಲೇ ಅನುಭವಕ್ಕೆ ಬರುತ್ತಿದೆ. ಪರಿಸರವನ್ನು ನಿರ್ಲಕ್ಷಿಸಿ ಸಾಧಿಸುವ ಭೌತಿಕ ಅಭಿವೃದ್ಧಿ ಹಿತವನ್ನು ತರಲು ಸಾಧ್ಯವೇ ಇಲ್ಲ. ಪರಿಸರದ ಸಂರಕ್ಷಣೆ ಮತ್ತು ಆ ನಿಟ್ಟಿನಲ್ಲಿ ಮಾಲಿನ್ಯವನ್ನು ತಗ್ಗಿಸುವುದು, ಅಭಿವೃದ್ಧಿ ಯೋಜನೆಗಳನ್ನು ವಿವೇಚನೆಯಿಂದ ಕೈಗೊಳ್ಳುವುದು ಸಾಮೂಹಿಕ ಹೊಣೆಗಾರಿಕೆ. ಇದು ಕೆಲವೇ ರಾಷ್ಟ್ರಗಳ, ಕೆಲವೇ ಸಂಸ್ಥೆಗಳ ಜವಾಬ್ದಾರಿಯಲ್ಲ. ಸರ್ಕಾರವೇ ಮಾಡಲಿ ಎಂದು ಜನರು ಕೂಡ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಪ್ಯಾರಿಸ್ ಒಪ್ಪಂದದಿಂದ ಹೊರಬಂದಿದ್ದ ಅಮೆರಿಕ ಮತ್ತೆ ಈ ಒಪ್ಪಂದಕ್ಕೆ ಒಳಗೊಂಡಿದ್ದು ಗೊತ್ತಿರುವಂಥದ್ದೇ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಗೊಳಿಸಲು ದಶಕದೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅದಕ್ಕೆ ಬೇಕಾದ ಕಾನೂನು ರೂಪಿಸಬೇಕು ಎಂದು ಭಾರತ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಗ್ರಹಿಸಿದೆ.

ದೇಶದ ಆರ್ಥಿಕ ರಾಜಧಾನಿ ಮುಂಬೈಯನ್ನು 2050ರೊಳಗೆ ಕಾರ್ಬನ್​ಮುಕ್ತಗೊಳಿಸಲು (ಜೀರೋ ಎಮಿಷನ್) ಮಹಾರಾಷ್ಟ್ರ ಸರ್ಕಾರ ವಿಸõತ ಯೋಜನೆಯನ್ನು ರೂಪಿಸಿರುವುದು ಸದ್ಯದ ವಿದ್ಯಮಾನ. ‘ಮುಂಬೈಯನ್ನು ಇಂಗಾಲಾಮ್ಲ ಹಾವಳಿಯಿಂದ ಬಿಡುಗಡೆಗೊಳಿಸುವುದು ಈ ಯೋಜನೆಯ ಗುರಿಯಾಗಿದೆ. ಸಂಬಂಧಪಟ್ಟ ವಿವಿಧ ಕ್ಷೇತ್ರಗಳ ತಜ್ಞರಿಂದ ಹಿಮ್ಮಾಹಿತಿ ಪಡೆದು ಈ ದೂರಗಾಮಿ ಪರಿಣಾಮದ ಯೋಜನೆಯನ್ನು ಸಿದ್ಧಪಡಿಸಲಾಗಿದೆ’ ಎಂದು ಮಹಾರಾಷ್ಟ್ರದ ಪರಿಸರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ. ದೇಶದಲ್ಲಿ ಇಂಗಾಲಾಮ್ಲ ಹೊರಸೂಸುವಿಕೆ (ಕಾರ್ಬನ್ ಎಮಿಷನ್) ಪ್ರಮಾಣವನ್ನು 2070ನೇ ಇಸವಿ ಹೊತ್ತಿಗೆ ಶೂನ್ಯ ಮಟ್ಟಕ್ಕಿಳಿಸುವ ದಿಸೆಯಲ್ಲಿ ಹೆಚ್ಚೆಚ್ಚು ಪರಿಸರಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಇತ್ತೀಚೆಗೆ ಪ್ರತಿಪಾದಿಸಿದ್ದಾರೆ. ಗ್ರೀನ್ ಫೈನಾನ್ಸಿಂಗ್ (ಪರಿಸರ ರಕ್ಷಣೆ ಹಣಕಾಸು) ಕಾಲದ ತುರ್ತು ಅಗತ್ಯವಾಗಿದೆ ಎಂಬುದಾಗಿ ಹೇಳಿ, ಈ ನಿಟ್ಟಿನಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸಲಾಗುವುದು ಎಂದಿದ್ದಾರೆ.

ಹವಾಮಾನ ಬದಲಾವಣೆ ವಿರುದ್ಧ ಹೋರಾಡಬೇಕಾದ, ಪರಿಸರಸ್ನೇಹಿ ಕ್ರಮಗಳನ್ನು ಅನುಷ್ಠಾನಗೊಳಿಸಬೇಕಾದ ಅಗತ್ಯವನ್ನು ಹಲವು ರಾಷ್ಟ್ರಗಳು ಒತ್ತಿ ಹೇಳಿವೆ. ಆದರೆ, ಇಂಥ ಹೇಳಿಕೆಗಳು ದೊಡ್ಡ ದೊಡ್ಡ ವೇದಿಕೆಗಳಿಂದ ಆಗಾಗ ಹೊಮ್ಮಿ, ಅಷ್ಟೇ ಬೇಗ ಮರೆಯಾಗಿ ಬಿಡುತ್ತವೆ ಎಂಬುದು ಸತ್ಯ. ಇಂಗಾಲದ ಹೊರಸೂಸುವಿಕೆ ಶೂನ್ಯಮಟ್ಟಕ್ಕೆ ಇಳಿಸುವ ಕುರಿತಾದ ಚರ್ಚೆ ಭಾರತದಲ್ಲಿ ಹಲವು ವರ್ಷಗಳ ಹಿಂದೆಯೇ ಆರಂಭವಾಗಿದೆ. ಆದರೆ, ಈ ದಿಕ್ಕಿನಲ್ಲಿ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಆಗಲಿಲ್ಲ. ಅತಿ ಮಾಲಿನ್ಯ ಹೊಂದಿರುವ ವಿಶ್ವದ ನಗರಗಳಲ್ಲಿ ಭಾರತದ ಹಲವು ನಗರಗಳಿವೆ ಎಂಬುದು ವಿಪರ್ಯಾಸ. ಮಹಾನಗರಗಳಂತೂ ತಮ್ಮ ಧಾರಣಾ ಸಾಮರ್ಥ್ಯವನ್ನು ಮೀರಿ ಬೆಳೆಯುತ್ತಿದ್ದು, ಶುದ್ಧ ಗಾಳಿ, ನೀರು ಮರೀಚಿಕೆಯಾಗುತ್ತಿದೆ. ಮುಂಬೈ ನಗರವನ್ನು ಕಾರ್ಬನ್​ವುುಕ್ತಗೊಳಿಸುವ ಯೋಜನೆ ಮಹತ್ವಪೂರ್ಣವಾದದ್ದು. ದೇಶದ ಇತರ ಮಹಾನಗರಗಳು ಕೂಡ ಈ ನಿಟ್ಟಿನಲ್ಲಿ ಆಲೋಚಿಸುವ ಮತ್ತು ಕಾರ್ಯಪ್ರವೃತವಾಗುವ ಸಮಯ ಬಂದಿದೆ. ಇಲ್ಲದಿದ್ದಲ್ಲಿ ಹವಾಮಾನ ಬದಲಾವಣೆಯ ವೈಪರೀತ್ಯಗಳು ಗಂಭೀರ ಸಮಸ್ಯೆ ತಂದೊಡ್ಡಬಲ್ಲವು. ಆಗ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net