ಸಂಪಾದಕೀಯ: ಕೃಷಿ ಸಂಶೋಧನೆ ಹೆಚ್ಚಲಿ, ಹವಾಮಾನ ಬದಲಾವಣೆ- ಪರಿಣಾಮ ಎದುರಿಸಬೇಕು

agriculture
Published on

ಹವಾಮಾನ ಬದಲಾವಣೆ ಎಂಬುದು ಇಂದಿನ ದಿನಮಾನದಲ್ಲಿ ಇಡೀ ವಿಶ್ವವನ್ನು ಬೇರೆ ಬೇರೆ ಬಗೆಯಲ್ಲಿ ಕಾಡುತ್ತಿದೆ. ತಾಪಮಾನ ಏರುವುದರಿಂದ ಆಗಬಹುದಾದ ಅಪಾಯಗಳ ಬಗ್ಗೆ ಈಗಾಗಲೇ ವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ. ವಿಶೇಷವಾಗಿ ತಾಪಮಾನ ಎರಡು ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಿದರೆ ಅದರಿಂದ ಸಮುದ್ರ ಮಟ್ಟ ಹೆಚ್ಚಿ ಏನೇನು ಪರಿಣಾಮಗಳು ಆಗಬಹುದು ಎಂಬ ಬಗ್ಗೆ ತಜ್ಞರು ವಿವರವಾಗಿ ತೆರೆದಿಟ್ಟಿದ್ದಾರೆ.

ಹೀಗಾಗಿಯೇ ಭೂಮಿಯ ತಾಪಮಾನ ಇನ್ನಷ್ಟು ಹೆಚ್ಚದಂತೆ ನೋಡಿಕೊಳ್ಳುವ ಸಲುವಾಗಿ ಜಾಗತಿಕ ದೇಶಗಳು ಪ್ಯಾರಿಸ್​ ಒಡಂಬಡಿಕೆ ಮಾಡಿಕೊಂಡಿವೆ. ಡೊನಾಲ್ಡ್​ ಟ್ರಂಪ್​ ಅಧ್ಯಕ್ಷರಾಗಿದ್ದಾಗ ಅಮೆರಿಕವನ್ನು ಈ ಒಪ್ಪಂದದಿಂದ ಹೊರಗೆ ತಂದಿದ್ದರು. ಈಗ ಮತ್ತೆ ಅಮೆರಿಕ ಒಪ್ಪಂದದ ವ್ಯಾಪ್ತಿಗೆ ಬರುವುದಾಗಿ ಹೇಳಿದೆ. ಭೂಮಿಯ ತಾಪಮಾನ ಹೆಚ್ಚದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ದೇಶಗಳು ಮತ್ತು ಎಲ್ಲ ನಾಗರಿಕರ ಮೇಲೂ ಇದೆ.

ಏಕೆಂದರೆ ಸಾಮೂಹಿಕ ಪ್ರಯತ್ನದಿಂದ ಮಾತ್ರ ಇದನ್ನು ಸಾಧಿಸಬಹುದೆ ಹೊರತು ವೈಯಕ್ತಿಕ ಪ್ರಯತ್ನಗಳ ಪರಿಣಾಮ ತುಂಬ ಸೀಮಿತ. ಕೃಷಿ ರಂಗದ ಮೇಲೂ ಹವಾಮಾನ ಬದಲಾವಣೆ ಪರಿಣಾಮ ಆಗಿಯೇ ಆಗುತ್ತದೆ. ಅಕಾಲಿಕ ಮಳೆ, ಅತಿವೃಷ್ಟಿ ಅಥವಾ ಅನಾವೃಷ್ಟಿ, ಪ್ರವಾಹದಂತಹ ಸನ್ನಿವೇಶಗಳು, ಹೊಸ ಹೊಸ ರೋಗ ಸಾಧ್ಯತೆ...ಹೀಗೆ ಕೃಷಿ ರಂಗ ಕೂಡಾ ಈ ವಿಷವರ್ತುಲದಿಂದ ಹೊರಗಿರಲು ಸಾಧ್ಯವಿಲ್ಲ. ಹೀಗಾಗಿ ಈ ಅಪಾಯವನ್ನು ಊಹಿಸಿ ಸಂಭಾವ್ಯ ಪರಿಹಾರೋಪಾಯಗಳನ್ನು ಹುಡುಕುತ್ತಲೇ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಸಂಶೋಧನೆಗಳು&ಅಧ್ಯಯನಗಳು ನಡೆಯಬೇಕಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ 35 ಹೊಸ ತಳಿಗಳನ್ನು ಬಿಡುಗಡೆ ಮಾಡಿರುವುದು ಈ ದಿಕ್ಕಿನಲ್ಲಿನ ಒಂದು ಹೆಜ್ಜೆ ಎಂದು ಹೇಳಬಹುದು.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್​) ಈ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಇವು ತಾಪಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಉಭಯ ಸವಾಲುಗಳನ್ನು ಎದುರಿಸುವ ಉದ್ದೇಶ ಹೊಂದಿವೆ. ಈ ತಳಿಗಳ ಪರಿಣಾಮಕಾರಿತ್ವ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆಯಾದರೂ, ಸರ್ಕಾರಿ ಸಂಸ್ಥೆಯೊಂದು ಈ ಉದ್ದೇಶದತ್ತ ಚಿತ್ತ ನೆಟ್ಟಿದ್ದು ಗಮನಾರ್ಹ. ಈಗ ಕೃಷಿ ಉದ್ಯಮದಲ್ಲಿ ಖಾಸಗಿ ಭಾಗವಹಿಸುವಿಕೆ ಬಹಳ ದೊಡ್ಡದಿದ್ದು, ಅವರೂ ಈ ಬಗ್ಗೆ ಉತ್ಸಾಹ ತೋರಬೇಕಿದೆ. ನಮ್ಮಲ್ಲಿ ರೈತರು ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆ ರಕ್ಷಣೆಯ ಹಲವು ಮಾಹಿತಿಗಳನ್ನು ಹೊಂದಿದ್ದಾರೆ. ಅಲ್ಲದೆ, ಅನೇಕ ವಿಶಿಷ್ಟ ತಳಿಗಳು ಕೂಡ ಅವರಿಗೆ ಗೊತ್ತಿವೆ.

ಈಗಿನ ಕಾಲದ ಅಗತ್ಯಕ್ಕೆ ತಕ್ಕಂತೆ ಆ ಜ್ಞಾನವನ್ನು ಕಾಪಿಟ್ಟುಕೊಂಡು, ಹೆಚ್ಚು ಪಸರಿಸಬೇಕಾಗಿದೆ. ಕೃಷಿ ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಹಾಲಿ ಜಾಗತೀಕರಣದ ಸವಾಲುಗಳನ್ನು ರೈತರು ಎದುರಿಸುವಂತಾಗುವ ನಿಟ್ಟಿನಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕಿದೆ. ಅಂಥ ಆವಿಷ್ಕಾರಗಳು ಅಕಾಡೆಮಿಕ್​ ಹೆಗ್ಗಳಿಕೆಗೆ ಮಾತ್ರ ಸೀಮಿತವಾಗದೆ, ರೈತರ ಹೊಲದಲ್ಲಿ ಮತ್ತು ಅವರ ಬದುಕಿನಲ್ಲಿ ಅದರ ಪರಿಣಾಮ ಗೋಚರಿಸಬೇಕು. ಅಂದಾಗ ಕೃಷಿಗೆ ವಿಮುಖರಾಗುವವರ ಸಂಖ್ಯೆ ತಗ್ಗುತ್ತದೆ; ಕೃಷಿ ಆಸಕ್ತಿ ಹೆಚ್ಚುತ್ತದೆ. ಅದರಲ್ಲೂ ಕರೊನೊತ್ತರ ಕಾಲದಲ್ಲಿ ಇತರ ರಂಗಗಳಂತೆ ಕೃಷಿ ಕೂಡ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವುದನ್ನು ಮರೆಯುವಂತಿಲ್ಲ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net