ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನ : ಜಿ.ಡಿ ಹರೀಶ್ ಗೌಡ ಭರವಸೆ

BTP18Photo2
Published on


ಮೈಸೂರು : ಸಂಗರಶೆಟ್ಟಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣದ ಕಾಮಗಾರಿಗೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ ಹರೀಶ್ ಗೌಡ ಭರವಸೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯ ವೇದಿಕೆ ಕಾರ್ಯಕ್ರಮವನ್ನು ಶಾಸಕ ಕೆ.ಮಹದೇವ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದರು.


ಸಂಘವು ನೂತನವಾಗಿ ತನ್ನದೇ ಆದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಎಂಡಿಸಿಸಿ ಬ್ಯಾಂಕ್ ಪರವಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುವುದು. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಶೀಘ್ರದಲ್ಲೇ ಉದ್ಘಾಟಿಸಿ ರೈತರಿಗೆ ಸೌಲಭ್ಯಗಳನ್ನು ನೀಡಬೇಕು. ಅಲ್ಲದೆ ಸಂಘವು ಇನ್ನಷ್ಟು ಸಾಲಗಳನ್ನು ಹೆಚ್ಚಾಗಿ ನೀಡುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕು ಇದರಿಂದ ಸಂಘದ ಅಭಿವೃದ್ಧಿ ಕೂಡ ಹೆಚ್ಚಿನ ಮಟ್ಟದಲ್ಲಿ ಸಾಗಲಿದೆ ಎಂದು ಸಲಹೆ ನೀಡಿದರು.


ಶಾಸಕ ಕೆ.ಮಹದೇವ್ ಮಾತನಾಡಿ, ಸಂಗರಶೆಟ್ಟಿಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನನಗೆ ಹೆಚ್ಚಿನ ಮತ ನೀಡುವ ಮೂಲಕ ಶಾಸಕ ಸ್ಥಾನವನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಬಾರದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಇನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಅತ್ತಿಗೋಡು ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ, ಎಂಡಿಸಿಸಿ ನಿರ್ದೇಶಕ ಸಿ.ಎನ್ ರವಿ, ಸಂಘದ ಅಧ್ಯಕ್ಷ ಎಸ್.ಪಿ ಮಂಜುನಾಥ್, ಉಪಾಧ್ಯಕ್ಷ ಎಸ್.ಬಿ ಸ್ವಾಮೀಗೌಡ, ನಿರ್ದೇಶಕರಾದ ಎಸ್.ಎನ್ ಶಶಿಧರ್, ಕಾಂತರಾಜ್, ಎಸ್.ಸಿ ಸೋಮೇಗೌಡ, ಎಸ್.ಬಿ ದಶರಥ, ಎಚ್.ಆರ್ ಬೇಬಿ, ರೂಪಾ, ಶೋಭಾ, ಮಹದೇವಾಚಾರಿ, ಕುಮಾರನಾಯಕ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಎಂಡಿಸಿಸಿ ಪ್ರತಿನಿಧಿ ಶಿವಕುಮಾರ್, ಸಿಇಒ ಎಚ್.ಎಸ್ ಮೂರ್ತಿ, ಮುಖಂಡರಾದ ಪಟೇಲ್ ನಟೇಶ್, ಗಗನ್, ದೇವರಾಜು, ರವಿ, ಕೆ.ಕೆ. ಹರೀಶ್, ರಘು, ಪ್ರೀತಿ ಅರಸ್, ಬಿ.ಜೆ ದೇವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net