

ಶೃಂಗೇರಿ: ಸ್ವಸಹಾಯ ಸಂಘದ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ‘ಮಾಸಿಕ ಸಂತೆ’ ಅತ್ಯುತ್ತಮ ವೇದಿಕೆಯಾಗಿದೆ. ಅದರ ಸದುಪಯೋಗವನ್ನು ಎಲ್ಲ ಸದಸ್ಯರೂ ಪಡೆದುಕೊಂಡು ಆತ್ಮಸ್ಥೆರ್ಯದಿಂದ ಮುನ್ನಡೆಯಬೇಕು ಎಂದು ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ ತಿಳಿಸಿದರು.
ಅಡ್ಡಗದ್ದೆ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಮಾಸಿಕ ಸಂತೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ತಯಾರಾದ ಉತ್ಪನ್ನಗಳು ಸಂಜೀವಿನಿ ಒಕ್ಕೂಟದ ಮೂಲಕ ಸಮುದಾಯವನ್ನು ತಲುಪಬೇಕು. ಆತ್ಮವಿಶ್ವಾಸದಿಂದ ಮಹಿಳೆಯರು ಮುನ್ನಡೆದಾಗ ಮಾತ್ರ ನಮ್ಮ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಸಂಜೀವಿನಿ ಗ್ರಾಪಂ ಒಕ್ಕೂಟದ ಅಧ್ಯಕ್ಷೆ ಶಾರದಾ ಮಾತನಾಡಿ, ಪ್ರಸ್ತುತ ತಾಲೂಕಿನಲ್ಲಿ ಸ್ವಸಹಾಯ ಸಂಘಗಳು ಉತ್ಪನ್ನಗಳನ್ನು ತಯಾರಿಸಿ ಜಿಲ್ಲೆ ಹಾಗೂ ರಾಜ್ಯದ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿವೆ. ಮಲೆನಾಡಿನ ಉತ್ಪನ್ನಗಳಿಗೆ ಹಲವೆಡೆ ಬೇಡಿಕೆ ಇದೆ. ಮಾಸಿಕ ಸಂತೆಯಲ್ಲಿ ಒಟ್ಟು 19 ಮಳಿಗೆಗಳಿವೆ ಎಂದು ತಿಳಿಸಿದರು. ಉಪಾಧ್ಯಕ್ಷೆ ಸುವರ್ಣಾ, ಕಾರ್ಯದರ್ಶಿ ಶೋಭಾ, ಸಹ ಕಾರ್ಯದರ್ಶಿ ಗಾಯತ್ರಿ, ಕೋಶಾಧ್ಯಕ್ಷೆ ಶ್ವೇತಾ, ಗ್ರಾಪಂ ಸದಸ್ಯ ಸುಂದರೇಶ್ ಇತರರಿದ್ದರು.