

ಶೃಂಗೇರಿ: ಸಂಘ-ಸಂಸ್ಥೆಗಳು ಸಮಾಜದ ಬೆಳವಣಿಗೆಗೆ ಸ್ಪಂದಿಸಬೇಕು. ನಾವು ಸಮಾಜಕ್ಕೆ ಕೊಡುವ ಕೊಡುಗೆ ಲಾನುಭವಿಗಳಿಗೆ ತಲುಪಿದಾಗ ಮಾತ್ರ ಸಂಸ್ಥೆಗಳ ಧ್ಯೇಯೋದ್ದೇಶಗಳು ಈಡೇರಲು ಸಾಧ್ಯ ಎಂದು ಮೈಸೂರು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ನಾಗೇಂದ್ರಕುಮಾರ್ ತಿಳಿಸಿದರು.
ರಾಜನಗರ ವಿದ್ಯಾಭಾರತಿ ಸಭಾಂಗಣದಲ್ಲಿ ಭಾನುವಾರ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಲಾದ ವಿದ್ಯಾರ್ಥಿ ವೇತನ ಸಮರ್ಪಣೆ, ಸೇವಾ ಮನ್ನಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೇವೆ ಎಂಬುದು ನಿಸ್ವಾರ್ಥ ಭಾವದಿಂದ ಕೂಡಿರಬೇಕು. ಸಂಪತ್ತಿನಲ್ಲಿ ಕೊಂಚ ಹಣವನ್ನು ಜನಸಾಮಾನ್ಯರ ಕಲ್ಯಾಣಕ್ಕಾಗಿ ಮೀಸಲಿಡಬೇಕು. ಕ್ಷೇಮಾಭಿವೃದ್ಧಿ ಸಂಘವು ವಿದ್ಯಾರ್ಥಿವೇತನ, ಸಾಧಕರಿಗೆ ಸನ್ಮಾನ, ಪರಿಸರ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದೆ. ಸಭೆ, ಸಮಾರಂಭಗಳು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಂಘವು ಪ್ರತಿಲಾಪೇಕ್ಷೆಯಿಲ್ಲದೆ ತಟ್ಟೆ, ಲೋಟಗಳನ್ನು ನೀಡುತ್ತಿದೆ. ಇಂತಹ ಕಾರ್ಯ ನಿರಂತರ ಸಾಗಲಿ ಎಂದು ಶುಭ ಹಾರೈಸಿದರು.
ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಗೂ ನಿವೃತ್ತ ಶಿಕ್ಷಕರಾದ ಸವಿತಾ ಹಾಗೂ ಕಲ್ಕೆರೆ ಸುರೇಶ್ ಅವರನ್ನು ಗೌರವಿಸಲಾಯಿತು. 27 ವಿದ್ಯಾರ್ಥಿಗಳಿಗೆ 78 ಸಾವಿರ ರೂ. ಹಾಗೂ ಅನಾರೋಗ್ಯಕ್ಕೆ ತುತ್ತಾದ ನಾಲ್ವರಿಗೆ ಸಂಘದಿಂದ 40 ಸಾವಿರ ರೂ. ನೀಡಲಾಯಿತು. ಕಾರ್ಯಕ್ರಮದಲ್ಲಿ ಗೋವಿನ ಮಹತ್ವದ ಕುರಿತು ಲೇಖಕ ಶೈಲೇಶ್ ಹೊಳ್ಳ ಉಪನ್ಯಾಸ ನೀಡಿದರು.
ಸಂಘದ ಅಧ್ಯಕ್ಷ ಶಶಿಧರ್, ಗೌರವಾಧ್ಯಕ್ಷ ಬಾಲಗಂಗಾಧರ್, ನಿಕಟಪೂರ್ವ ಗೌರವಾಧ್ಯಕ್ಷ ಶ್ರೀಕೃಷ್ಣ, ಉಪಾಧ್ಯಕ್ಷೆ ಪಾರ್ವತಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್, ಪ್ರಧಾನ ಕಾರ್ಯದರ್ಶಿ ಗಣಿತವನ ಶಿವಶಂಕರ್ ಇದ್ದರು.