

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಹಾಗೂ ಬ್ಲೂ ಮೈಂಡ್ ಸಲ್ಯೂಷನ್ಸ್ ಸಹಯೋಗದಲ್ಲಿ ಗುರುವಾರ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ರಾಗ ತರಂಗಿಣಿ- ಸುಗಮ ಸಂಗೀತ, ಸಿತಾರ್ ವಾದನ, ದಾಸವಾಣಿ ಕಾರ್ಯಕ್ರಮ ಜರುಗಿತು. ಮಳೆಯ ನಡುವೆಯೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಂಗೀತ ರಸದೌತಣ ಸವಿದರು.
ಸಿತಾರ್ ವಾದಕಿ, ಗಾಯಕಿ ಸಿ.ಎಸ್.ವೇದಶ್ರೀ, ಹಿನ್ನೆಲೆ ಗಾಯಕರಾದ ಉಪ್ಪುಂದ ರಾಜೇಶ್ ಪಡಿಯಾರ್, ಹಂಸಿನಿ ಸುಗಮ ಸಂಗೀತ ಹಾಗೂ ದಾಸವಾಣಿ ನಡೆಸಿಕೊಟ್ಟರು. ಆ ಮೂಲಕ ಸಭಿಕರಿಗೆ ಮೂರು ಕಾರ್ಯಕ್ರಮಗಳ ರಸದೌತಣ ಉಣಬಡಿಸಿದರು. ರಶ್ಮಿ ಚಿಕ್ಕಮಗಳೂರು ಕೂಡ ಕೆಲ ಗೀತೆಗಳನ್ನು ಹಾಡಿದರು.
ಪಕ್ಕವಾದ್ಯದಲ್ಲಿ ಪುರುಷೋತ್ತಮ- ಕೀ ಬೋರ್ಡ್, ವಿಶ್ವನಾಥ್- ಮ್ಯಾಂಡೋಲಿನ್, ರಮೇಶ್ ಧನ್ನೂರು, ಸುಚೇಂದ್ರ- ತಬಲ, ವಿನಯ್ ರಂಗದೋಳ್- ರಿದಂ ಪ್ಯಾಡ್ ನುಡಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಮಾತನಾಡಿ, ಕಳೆದ 14 ತಿಂಗಳಲ್ಲಿ ಪರಿಷತ್ ವತಿಯಿಂದ ನಡೆಯುತ್ತಿರುವ 28ನೇ ಕಾರ್ಯಕ್ರಮ ಇದಾಗಿದ್ದು, ಮೇ 17-18 ರಂದು ಸುಗಮ ಸಂಗೀತ ಕಾರ್ಯಾಗಾರ ಏರ್ಪಡಿಸಲಾಗಿದೆ. ಮೇ 27 ರಂದು ಕೆ.ಎಸ್.ಅಶ್ವತ್ಥ್ ನೆನಪಿನ ಕಾರ್ಯಕ್ರಮವನ್ನು ಶಂಕರ್ ಅಶ್ವತ್ಥ್ ಅವರ ನಿರೂಪಣೆಯಲ್ಲಿ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಲ್.ಭಾರತಿ, ಸುಗಮ ಸಂಗೀತ ಗಾಯಕಿ ರಶ್ಮಿ ಚಿಕ್ಕಮಗಳೂರು, ಮಹೇಶ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ತಬಲ ವಾದಕ ರಮೇಶ್ ಧನ್ನೂರು, ಪ.ಬಂಗಾಳ ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ಪತ್ರಿಕಾ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರನ್ನು ಅಭಿನಂದಿಸಲಾಯಿತು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಇದ್ದರು.