

ಮುಂಬೈ: ಭಾರತೀಯ ಷೇರುಪೇಟೆ ಗುರುವಾರ ಆಘಾತ ಅನುಭವಿಸಿದ್ದು, ಸೆನ್ಸೆಕ್ಸ್ 1150 ಅಂಕ ಇಳಿಕೆ ಕಂಡು 53 ಸಾವಿರಕ್ಕಿಂತ ಕೆಳಮಟ್ಟಕ್ಕೆ ಕುಸಿದಿದೆ. ಅಮೆರಿಕದ ಹಣದುಬ್ಬರ ಪ್ರಮಾಣ ಏರಿಕೆ ಸಹಿತ ಜಾಗತಿಕ ಮಾರುಕಟ್ಟೆ ಪ್ರಭಾವದ ಕಾರಣ ಸತತ 5ನೇ ದಿನವೂ ಭಾರತದ ಷೇರುಪೇಟೆ ಇಳಿಕೆ ದಾಖಲಿಸಿದೆ. ಸೆನ್ಸೆಕ್ಸ್ 1158 ಅಂಕ ಇಳಿಕೆ ಕಂಡು, 52,930ರಲ್ಲಿ ಹಾಗೂ ನಿಫ್ಟಿ 359 ಅಂಕ ಕುಸಿತ ಕಾಣುವ ಮೂಲಕ 15,808ರಲ್ಲಿ ದಿನದ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್ನಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ. 5.82 ಇಳಿಕೆ ದಾಖಲಿಸಿದೆ. ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಟೈಟನ್, ಎಲ್ಆಂಡ್ಟಿ, ರಿಲಯನ್ಸ್ ಸಹಿತ ಪ್ರಮುಖ ದಿಗ್ಗಜ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಅಮೆರಿಕದ ಹಣದುಬ್ಬರ ಪ್ರಮಾಣ ಶೇ. 8.3 ದಾಖಲಾಗಿದ್ದು, ಫೆಡರಲ್ ರಿಸರ್ವ್ ಅಂದಾಜಿಗಿಂತಲೂ ಇದು ಹೆಚ್ಚಾಗಿದೆ. ಹೀಗಾಗಿ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಗೋಚರಿಸಿದೆ. ಜತೆಗೆ ಚೀನಾದಲ್ಲಿ ಕರೊನಾ ಪ್ರಕರಣ ಇನ್ನಷ್ಟು ತೀವ್ರಗೊಳ್ಳುತ್ತಿರುವುದು ಭೀತಿ ಮೂಡಿಸಿದೆ. ಈ ಕಾರಣಕ್ಕೆ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡತೊಡಗಿದ್ದಾರೆ. ಅಮೆರಿಕ, ಯುರೋಪ್, ಏಷ್ಯಾ ದೇಶಗಳ ಎಲ್ಲ ಮಾರುಕಟ್ಟೆಗಳಲ್ಲಿ ಗುರುವಾರ ಮಂದಗತಿ ದಾಖಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲ ಶೇ. 2 ಇಳಿಕೆ ಕಂಡಿದ್ದು, ಪ್ರತಿ ಬ್ಯಾರಲ್ಗೆ 105.7 ಡಾಲರ್ ಆಗಿದೆ.
18.7 ಲಕ್ಷ ಕೋಟಿ ರೂ. ನಷ್ಟ: ಕಳೆದ 5 ದಿನದಲ್ಲಿ ಸಂಭವಿಸಿದ ಇಳಿಕೆಯ ಕಾರಣ ಹೂಡಿಕೆದಾರರಿಗೆ 18.7 ಲಕ್ಷ ಕೋಟಿ ರೂ. ನಷ್ಟ ಸಂಭವಿಸಿದೆ. ಸೆನ್ಸೆಕ್ಸ್ ಕಳೆದ 5 ದಿನಗಳಲ್ಲಿ ಶೇ. 5 ಇಳಿಕೆ ಕಂಡಿದೆ. ಹಣದುಬ್ಬರ, ರಷ್ಯಾ ಯುದ್ಧ, ಬೆಲೆ ಏರಿಕೆ ಕಾರಣ ಆರ್ಥಿಕತೆಗೆ ಹಿನ್ನಡೆ ಆಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಣದುಬ್ಬರ ಪ್ರಮಾಣದಲ್ಲೂ ಏರಿಕೆ: ದೇಶದಲ್ಲಿ ಏಪ್ರಿಲ್ ತಿಂಗಳ ಹಣದುಬ್ಬರ ಪ್ರಮಾಣ ಶೇ. 7.79ಗೆ ಏರಿಕೆ ಕಂಡಿದೆ. ಸತತ ನಾಲ್ಕನೇ ತಿಂಗಳೂ ಆರ್ಬಿಐ ಗುರಿಗಿಂತ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ದಾಖಲಾಗಿದೆ. ಗ್ರಾಹಕರ ಬಳಕೆಯ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬಂದ ಕಾರಣ ಹಣದುಬ್ಬರ ಪ್ರಮಾಣವೂ ಏರಿಕೆಯಾಗಿದೆ. ಗ್ರಾಹಕರ ಆಧಾರಿತ ಹಣದುಬ್ಬರ ಪ್ರಮಾಣ ಏಪ್ರಿಲ್ನಲ್ಲಿ ಶೇ. 8.33ಕ್ಕೆ ಏರಿಕೆ ಕಂಡಿದ್ದು, ಇದು ಈವರೆಗಿನ ದಾಖಲೆಯಾಗಿದೆ.
ಕ್ರಿಪ್ಟೊ ಭಾರಿ ನಷ್ಟ: ಜಾಗತಿಕವಾಗಿ ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆ ಕೂಡ ಭಾರಿ ಕುಸಿತ ಕಂಡಿದೆ. ಬಿಟ್ಕಾಯಿನ್ ಶೇ. 10, ಎಥಿರಿಯಮ್ ಶೇ. 16 ಇಳಿಕೆ ಕಂಡಿದೆ. ಒಟ್ಟಾರೆ ಕ್ರಿಪ್ಟೊ ಮಾರುಕಟ್ಟೆಯಲ್ಲಿ ಒಂದೇ ದಿನ 200 ಬಿಲಿಯನ್ ಡಾಲರ್ ಮೊತ್ತದ ನಷ್ಟ ಸಂಭವಿಸಿದೆ. ಬಿಟ್ಕಾಯಿನ್ ಮತ್ತಿತರ ಕ್ರಿಪ್ಟೊಗಳು ಈವರೆಗೆ ಶೇ. 50 ಇಳಿಕೆ ಕಂಡಿವೆ.
ರೂಪಾಯಿ ದಾಖಲೆ ಕುಸಿತ: ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 15 ಪೈಸೆ ಇಳಿಕೆ ಕಂಡಿದ್ದು, 77.40ಕ್ಕೆ ತಲುಪಿದೆ. ಇದು ಈ ವರೆಗೆ ಸಂಭವಿಸಿದ ದಾಖಲೆಯ ಇಳಿಕೆಯಾಗಿದೆ. 77.63ವರೆಗೂ ತಲುಪಿದ್ದ ರೂಪಾಯಿ, ಕೊನೆಗೆ 77.40ಕ್ಕೆ ವಹಿವಾಟು ಮುಗಿಸಿತು.