ಶ್ರೀರಾಮ ಸರ್ವಜನರ ದೈವ

sudhakar (1)
Published on

ಚಿತ್ರದುರ್ಗ: ಹಿಂದಿನ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಪ್ರಸ್ತಾಪಿಸಿದ್ರು. ಈ ಬಾರಿಯ ಲೋಕಸಭೆ ಚುನಾವಣೆಗೆ ಶ್ರೀರಾಮನ ಫೋಟೊ ತೋರಿಸುತ್ತಿದ್ದಾರೆ. ಇದೆಲ್ಲ ಸ್ಟಂಟ್ ರೀ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯರು ಧಾರ್ಮಿಕ ವಿಚಾರ ನಂಬುತ್ತಾರೆ. ಹೀಗಾಗಿ ಚುನಾವಣೆ ಬಂದಾಗ ಅವರ ಮನಸ್ಸು ಸೆಳೆಯೋಕೆ ಮಾಡಿರುವ ಗಿಮಿಕ್. ಇದು ಲೋಕಸಭೆಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಾರಿ ಯಾರೂ ಮೂರ್ಖರಾಗುವುದಿಲ್ಲ ಎಂದರು.

ಶ್ರೀರಾಮಮಂದಿರ ನಿರ್ಮಾಣಕ್ಕೆ ನಾವೂ ದುಡ್ಡು, ಇಟ್ಟಿಗೆ ಕೊಟ್ಟಿದ್ದೇವೆ. ರಾಮ ಎಲ್ಲರಿಗೂ ದೇವರು, ಇದರಲ್ಲಿ ಭೇದ ಮಾಡಿವಂಥದ್ದು ಇಲ್ಲ. ಕಳೆದ ಬಾರಿ ಪುಲ್ವಾಮಾ ದಾಳಿ ಅಂತಾ ಫೇಕ್ ವಿಮಾನ ಹಾರಾಟದ ದೃಶ್ಯ ತೋರಿಸಿದ್ದರು. ಈ ಕುರಿತು ಪೈಲಟ್ ಮಾಹಿತಿ ನೀಡಿದ್ದರು. ಫೇಕ್ ಎಂದು ವಿರೋಧಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಈಗ ಬಿಜೆಪಿ ಜತೆಗಿದ್ದಾರೆ. ಅವರ ಜಾತ್ಯತೀತ ಮೌಲ್ಯಗಳು ಎಲ್ಲಿ ಹೋಗಿವೆ ಎಂದು ಪ್ರಶ್ನಿಸಿದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಲ್ಲಿವರೆಗೂ ನೋಡ್ಕೊಂಡು ಕೂತ್ಕೋತಾರೆ. ಈ ಹಿಂದೆ ಬಿಜೆಪಿ ಶೇ.40 ಕಮಿಷನ್ ಪಡೆಯುವ ಸರ್ಕಾರವೆಂದು ಹೇಳಿದ್ದರು. ಈಗ ಸ್ವಪಕ್ಷದ ನಾಯಕರ ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ್ದಾರೆ. ಅವರ ಅವಧಿಯಲ್ಲಿನ ಬೆಲೆ ಏರಿಕೆ, ಬಡವರ ವಿರೋಧಿ ನೀತಿಗಳಿಂದಾಗಿ ಜನ ಕಾಂಗ್ರೆಸ್ ಕೈ ಹಿಡಿದಿದ್ದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶೌಚಗೃಹ ಸ್ವಚ್ಛತೆಗೆ ಮಕ್ಕಳ ಬಳಕೆ ತಪ್ಪು. ಕೆಲವೆಡೆ ಇಂತಹ ಪ್ರಕರಣಗಳು ನಡೆದಿದ್ದು, ಇದನ್ನು ಖಂಡಿಸುತ್ತೇನೆ. ಈ ಸಂಬಂಧ ಇಲಾಖೆ ಕ್ರಮ ಕೈಗೊಂಡಿದೆ. ನಾನೂ ಶಾಲೆಗೆ ಹೋಗುವಾಗ ಕಸ ಗುಡಿಸಿ, ನೆಲ ಸಾರಿಸಿದ್ದೆ ಎಂದು ಗ್ಯಾರಂಟಿಗೆ ಹಣವಿಲ್ಲದ್ದಕ್ಕೆ ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ಸ್ವಚ್ಛತೆಗೆ ಮಕ್ಕಳ ಬಳಕೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

ಮೇವು ದಾಸ್ತಾನಿಗೆ ಕ್ರಮ ವಹಿಸಿದ್ದು, ಅವಶ್ಯ ಇರುವೆಡೆ ಗೋಶಾಲೆ ಆರಂಭಿಸುತ್ತೇವೆ. ಕುಡಿಯುವ ನೀರಿಗೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಬರ ನಿರ್ವಹಣೆಗೆ ಸರ್ಕಾರ ಬದ್ಧವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net