ಶ್ರೀಕಂಠನ ದರ್ಶನ ಪಡೆದ ನೂತನ ಜಿಲ್ಲಾಧಿಕಾರಿ

27NGD3
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ಗುರುವಾರ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದರು.
Published on

ನಂಜನಗೂಡು: ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವ ಡಾ.ಕೆ.ವಿ.ರಾಜೇಂದ್ರ ಅವರು ಅಧಿಕಾರ ಸ್ವೀಕಾರಕ್ಕೂ ಮುನ್ನ ಗುರುವಾರ ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ವರ್ಷಿಕಾ, ಪುತ್ರಿ ಅಧ್ವಿಕಾ ಜತೆ ದೇಗುಲಕ್ಕೆ ಆಗಮಿಸಿದ ಡಿಸಿ ಡಾ.ಕೆ.ವಿ.ರಾಜೇಂದ್ರ ಅವರನ್ನು ದೇಗುಲ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಮೂಲ ಗರ್ಭಗುಡಿ ಹಾಗೂ ಪಾರ್ವತಿ ಅಮ್ಮನ ಗುಡಿಯಲ್ಲಿ ವಿಶೇಷ ಪೂಜೆ ಪೂಜೆ ಸಲ್ಲಿಸಿದ ಬಳಿಕ ದೇಗುಲದಲ್ಲಿರುವ ಎಲ್ಲ ಗುಡಿಗಳಿಗೂ ಭೇಟಿ ನೀಡಿ ದರ್ಶನ ಪಡೆದರು. ನಂತರ ಅವರಿಗೆ ಪ್ರಧಾನ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ಶಾಲು ಹೊದಿಸಿ ಗೌರವಿಸಿದರು. ದೇಗುಲ ಆಡಳಿತ ಮಂಡಳಿ ವತಿಯಿಂದ ಪ್ರಸಾದ ನೀಡಿ ಸತ್ಕರಿಸಲಾಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ವಿ.ರಾಜೇಂದ್ರ, ದೇವಾಲಯಗಳು ಹೆಚ್ಚು ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿರುವ ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ದಕ್ಷಿಣ ಕಾಶಿ ಶ್ರೀಕಂಠೇಶ್ವರಸ್ವಾಮಿ ದರ್ಶನ ಮಾಡಿದ್ದೇನೆ. ಜಿಲ್ಲೆಯ ಎಲ್ಲ ಅಧಿಕಾರಿ ವರ್ಗದವರನ್ನು ಒಟ್ಟುಗೂಡಿಸಿಕೊಂಡು ಉತ್ತಮ ಆಡಳಿತ ನೀಡಲು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.
ತಹಸೀಲ್ದಾರ್ ಎಂ.ಶಿವಮೂರ್ತಿ, ದೇವಾಲಯದ ಇಒ ಜಗದೀಶ್‌ಕುಮಾರ್, ರಾಜಸ್ವ ನಿರೀಕ್ಷಕ ಪ್ರಕಾಶ್‌ಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net